ಹಥ್ರಾಸ್ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯ ತಂದೆಯನ್ನು ಗುಂಡಿಕ್ಕಿ ಹತ್ಯೆ
ಹಥ್ರಾಸ್ : ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ ಆರೋಪಿ ಜೈಲಿನಿಂದ ಹೊರಬಂದು ಸಂತ್ರಸ್ತೆಯ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ನಡೆದಿದೆ.
ಗೌರವ್ ಶರ್ಮಾ ಸಂತ್ರಸ್ತೆಯ ತಂದೆಯನ್ನು ಕೊಂದ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಯುವತಿಯ ತಂದೆಯ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಗೌರವ್ ಶರ್ಮಾ ನನ್ನು ಪೊಲೀಸರು 2018ರಲ್ಲಿ ಬಂಧಿಸಿದ್ದರು. ಇದೀಗ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಬಳಿಕ ಎರಡೂ ಕುಟುಂಬಗಳು ಪರಸ್ಪರ ದ್ವೇಷಿಸುತ್ತಿದ್ದವು. ದೇವಸ್ಥಾನಕ್ಕೆ ತೆರಳಿದ್ದ ಎರಡೂ ಕುಟುಂಬಗಳ ಮಧ್ಯೆ ಮತ್ತೆ ಜಗಳವಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸಂತ್ರಸ್ತೆಯ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.