| ಉಡುಪಿ : ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದ 1ನೇ ವಾರ್ಡ್ ನ ಶ್ರೀಕೃಷ್ಣ ಮಾರುತಿ ಜನತಾ ಕಾಲನಿಯಲ್ಲಿ ಸರಕಾರದ ಅನುದಾನದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರ ಶಿಫಾರಸಿನ ಮೇರೆಗೆ ಮುಖ್ಯರಸ್ತೆ ಹಾಗೂ ಹಲವಾರು ಅಡ್ಡ ರಸ್ತೆಗಳ ಕಾಂಕ್ರೀಟಿಕರಣ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ಅನುದಾನದ ವಿವರಗಳುಳ್ಳ ಫಲಕಗಳನ್ನು ತೆರವುಗೊಳಿಸಿದ್ದರ ಬಗ್ಗೆ ವಾರ್ಡ್ ಕಾಂಗ್ರೆಸ್ ಸಮಿತಿ ಆಕ್ರೋಶ ವ್ಯಕ್ತಪಡಿಸಿ, ಮರುಸ್ಥಾಪಿಸುವಂತೆ ಕಡೆಕಾರ್ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದೆ.
ಸರಕಾರದ ನಿಯಮದ ಪ್ರಕಾರವಾಗಿಯೇ ಸಂಬಂಧಪಟ್ಟ ಅಭಿವೃದ್ಧಿ ಕೆಲಸಗಳ ಫಲಕಗಳನ್ನು ಹಾಕಲಾಗಿತ್ತು. ಆದರೆ ಇದನ್ನೆಲ್ಲ ಸಹಿಸಲಾಗದ ಕೆಲವು ವ್ಯಕ್ತಿಗಳು ಜನತಾ ಕಾಲೊನಿಯಲ್ಲಿ ಹಾಕಿದ ಫಲಕಗಳನ್ನು ಕಿತ್ತೆಸೆಯುತ್ತಿರುವುದು ಎಲ್ಲ ಪಕ್ಷಗಳ ಜನಪ್ರತಿನಿಧಿಗಳಿಗೆ, ಎಲ್ಲಾ ಸರ್ಕಾರಗಳಿಗೆ ಹಾಗೂ ಸಾರ್ವಜನಿಕರ ಆಸ್ತಿಗೆ ಮಾಡಿದ ಅಪಮಾನ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಫಲಕಗಳನ್ನು ಮರು ಸ್ಥಾಪಿಸುವಂತೆ, ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಹಾಗೂ ಉಪಾಧ್ಯಕ್ಷರಾದ ನವೀನ್ ಶೆಟ್ಟಿ ಅವರಿಗೆ 11ನೇ ವಾರ್ಡ್ ನ ಕಾಂಗ್ರೆಸ್ ಸಮಿತಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಯತೀಶ್ ಕರ್ಕೇರ, ಶಶಾಂಕ್ ಪೂಜಾರಿ, ನವೀನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. | |