ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಕಾರ್ಮಿಕ ಮೃತ್ಯು
ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿಯೊಂದು ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದು ಕಾರ್ಮಿಕ ಮೃತಪಟ್ಟ ಘಟನೆ ಬ್ರಹ್ಮಾವರ ಕರ್ಜೆ ಸಮೀಪದ ದಾರಣ ಕಂಬಳ ಕ್ರಾಸ್ ಬಳಿ ನಡೆದಿದೆ.
ದಾರಣ ಕಂಬಳ ಕ್ರಾಸ್ ನಿವಾಸಿ ಕೃಷ್ಣ ಪುತ್ರನ್ (51) ಮೃತಪಟ್ಟವರು. ಇವರು ನಿನ್ನೆ (ಫೆ.28) ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಗೇರು ಬೀಜ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ಕೃಷ್ಣ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಬಜ್ಪೆಯ ಅಶ್ರಫ್ ಎಂಬಾತ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಲಾರಿ ಕಾರ್ಮಿಕರಿಗೆ ಡಿಕ್ಕಿ ಹೊಡೆದು ಹತ್ತು ಮೀಟರ್ ಆಳದ ಗದ್ದೆಗೆ ಉರುಳಿಬಿದ್ದಿದ್ದು, ಲಾರಿ ಮುಂಭಾಗ ಜಖಂಗೊಂಡಿದೆ. ಇನ್ನು ಲಾರಿ ಗದ್ದೆಗೆ ಉರುಳುವ ವೇಳೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮೂವರು ಮಹಿಳೆಯರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇವರು ಒಂದು ಕ್ಷಣ ಮೈಮರೆತ್ತಿದ್ದರೂ, ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.
ಇನ್ನು ಕೃಷ್ಣ ಅವರು ಮೃತಪಟ್ಟ ಸುದ್ಧಿ ತಿಳಿದು, ಸ್ಥಳಕ್ಕೆ ಬಂದ ಕೃಷ್ಣ ಅವರ ಪತ್ನಿಯು ತಾನು ಸಾಯುತ್ತೇನೆಂದು ಬಸ್ಸಿನಡಿ ಬೀಳಲು ಹೋಗಿದ್ದರು. ಆದರೆ, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.