ಆರ್ಥಿಕ ಪತನ ಆಗಿರುವುದು ನಿಜ, ನಾನೆಲ್ಲಿಗೂ ಓಡಿ ಹೋಗಿಲ್ಲ, ಹೋಗೋದು ಇಲ್ಲ: ಬಿ.ಆರ್ ಶೆಟ್ಟಿ

ಉಡುಪಿ : ನನ್ನ ಕನಸಿನ ಕೂಸಾಗಿರುವ ಬಿ.ಆರ್.ಎಸ್ ಲೈಫ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಾನು ನಿರ್ಮಾಣ ಮಾಡುತ್ತೇನೆ. ಅದೇ ರೀತಿ ಹಾಜಿ ಅಬ್ದುಲ್ಲಾ ಶಂಭು ಶೆಟ್ಟಿ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇನೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್ ಶೆಟ್ಟಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇಂದು ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಸಾವಿರನೇ ಮಗು ಜನಿಸಿರುವ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಸ್ಮಾರಕ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ಗ್ರೂಪ್ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶ ಇದೆ ಎಂದು ಹೇಳಿದರು.

ಇನ್ನು ತಮ್ಮ ಆರ್ಥಿಕ ಪಥನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಆರ್ಥಿಕ ಪತನ ಆಗಿರುವುದು ನಿಜ, ಆದರೆ ನಾನೆಲ್ಲಿಗೂ ಓಡಿ ಹೋಗಿಲ್ಲ, ಹೋಗೋದು ಇಲ್ಲ. ನನ್ನ ಸಾಮ್ರಾಜ್ಯ ಪತನ ಆಗಿದ್ದು ನಿಜ. ಆದರೆ ಅದಕ್ಕೆ ನಾನು ಕಾರಣ ಅಲ್ಲ, ನಾನೊಬ್ಬ ಬಲಿಪಶುವಾಗಿದ್ದೇನೆ. ಅದೀಗ ಕೋರ್ಟ್ ಅಂಗಳದಲ್ಲಿದ್ದು ಆ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ಭಾರತದಲ್ಲಿ ತನ್ನದು 1 ರೂ. ಸಾಲವಿಲ್ಲ ಎಂದ ಅವರು, ವಿದೇಶದ ಬ್ಯಾಂಕ್‍ಗಳಲ್ಲಿ ಸಾಲಪಡೆದಿದ್ದೇನೆ. ಆದರೆ ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗುತ್ತೇನೆ 2018ರಲ್ಲಿ ನಮ್ಮ ಸಂಸ್ಥೆ ಆಸ್ತಿ ಮೌಲ್ಯ 12.8 ಬಿಲಿಯನ್ ಡಾಲರ್ ಇತ್ತು. ಆದರೆ ನಂಬಿಕಸ್ಥರೇ ನನಗೆ ಮೋಸ ಮಾಡಿದ್ದರಿಂದ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದೇನೆ. ಒಂದು ಕಾಲದಲ್ಲಿ ದೇಶದ 84 ಬ್ಯಾಂಕ್‍ಗಳು ಸಾಲ ನೀಡಲು ಮುಂದೆ ಬರುತ್ತಿದ್ದವು. ತಮ್ಮಲ್ಲಿ ವ್ಯವಹಾರ ನಡೆಸುವಂತೆ ದಂಬಾಲು ಬೀಳುತ್ತಿದ್ದವು. ಆದರೆ ಈಗ ದೇಶದ ಯಾವುದೇ ಬ್ಯಾಂಕ್‍ಗಳು ಸಾಲ ನೀಡುತ್ತಿಲ್ಲ. ಟ್ರಂಪ್ ಕೂಡ ಒಂದು ಕಾಲದಲ್ಲಿ ಸುಸ್ಥಿದಾರರಾಗಿದ್ದರು. ನಂತರ ಸ್ವಂತ ಪರಿಶ್ರಮದಿಂದ ಅಮೇರಿಕಾದ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ನಾನೂ  ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.  

 ಈ ಬಗ್ಗೆ ಮಾತು ಮುಂದುವರೆಸಿದ ಅವರು, ಮಾಧ್ಯಮದವರು ವಿಜಯ್ ಮಲ್ಯ ಮೋಸ ಮಾಡಿ ಓಡಿ ಹೋದ, ನೀರವ್ ಮೋದಿ ಬ್ಯಾಂಕುಗಳಿಗೆ ಮೋಸ ಮಾಡಿ ಓಡಿ ಹೋದ ಎಂದು ಬರೆಯುವ ಮಾಧ್ಯಮಗಳು ಬಿ.ಆರ್ ಶೆಟ್ಟಿ ಓಡಿಹೋದರು ಎಂದು ಬರೆಯುತ್ತಾರೆ. ಆದರೆ ನಾನೆಲ್ಲಿಗೂ ಓಡಿ ಹೋಗಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚೆ ಮಾಡಲು ನನಗೆ ನಾಚಿಕೆಯಾಗುತ್ತದೆ. ಈ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೇನೆ. ಆದರೆ ಇವತ್ತಿನ ನನ್ನ ಪರಿಸ್ಥಿತಿಯಲ್ಲಿ ಅವರ ಮುಂದೆ ನಿಲ್ಲಲು ನನಗೆ ಮುಜುಗರ ಆಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!