ಕೆಂಪು ಕೋಟೆ ಹಿಂಸಾಚಾರ ಬಿಜೆಪಿಯ ಯೋಜಿತ ಪಿತೂರಿ, ಕೃಷಿ ಕಾಯ್ದೆ ರೈತರಿಗೆ ಡೆತ್ ವಾರಂಟ್: ಕೇಜ್ರಿವಾಲ್

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ರೈತರಿಗೆ ಡೆತ್ ವಾರಂಟ್.ಸರ್ಕಾರ ಅವರ ಭೂಮಿಯನ್ನು ವಶಪಡಿಸಿಕೊಂಡು ಮೂರ್ನಾಲ್ಕು ಬಂಡವಾಳಶಾಹಿಗಳಿಗೆ ನೀಡಲು ಮುಂದಾಗಿದೆ. ಈ ಕೃಷಿ ಕಾಯ್ದೆಗಳು ಜಾರಿಗೆ ಬಂದರೆ ರೈತರು ತಮ್ಮ ಜಮೀನಿನಲ್ಲಿಯೇ ಕಾರ್ಮಿಕರಾಗುತ್ತಾರೆ. ಹೀಗಾಗಿ ಇದು ರೈತರಿಗೆ ಮಾಡು ಇಲ್ಲವೇ ಮಡಿಯ ಪರಿಸ್ಥಿತಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. 

ಮೀರತ್ ನಲ್ಲಿ ಇಂದು ಮಾತನಾಡಿದ ಅವರು, ಬ್ರಿಟಿಷರು ಕೂಡ ತಮ್ಮ ಆಳ್ವಿಕೆ ಸಮಯದಲ್ಲಿ ರೈತರನ್ನು ಇಷ್ಟೊಂದು ತುಳಿದಿರಲಿಲ್ಲ, ರೈತರ ಭೂಮಿಯ ವಿಚಾರದಲ್ಲಿ ತಗಾದೆಯೆತ್ತಿರಲಿಲ್ಲ. ಆದರೆ ಇಂದಿನ ಎನ್ ಡಿಎ ಸರ್ಕಾರ ಮಾತ್ರ ಬ್ರಿಟಿಷರಿಗಿಂತ ಕಡೆ ಎಂದು ಆಕ್ರೋಶದಿಂದ ಹೇಳಿದರು.

ಕೆಂಪು ಕೋಟೆ ದುರ್ಘಟನೆ ಬಿಜೆಪಿಯ ಪಿತೂರಿ: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ದುರ್ಘಟನೆ ಪೂರ್ವ ನಿಯೋಜಿತ ಕೃತ್ಯ. ಪ್ರತಿಭಟನಾ ನಿರತ ರೈತರಿಗೆ ದೆಹಲಿಯ ಮಾರ್ಗಗಳು ಗೊತ್ತಿವಲ್ಲದಿರುವಾಗ ಬಿಜೆಪಿ ಕಡೆಯವರೇ ಅವರಿಗೆ ತಪ್ಪು ದಾರಿ ತೋರಿಸಿದರು ಎಂದು ಹಲವರು ನನಗೆ ಹೇಳಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದವರು ಕೂಡ ಬಿಜೆಪಿ ಕಾರ್ಯಕರ್ತರೇ. ನಮ್ಮ ರೈತರು ಎಂದಿಗೂ ದೇಶ ವಿರೋಧಿ ಕೃತ್ಯ ನಡೆಸಲು ಸಾಧ್ಯವಿಲ್ಲ ಎಂದರು.

ದೇಶ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರ ರೈತರ ವಿರುದ್ಧ ಕೇಸು ಹಾಕಿದೆ. ಬ್ರಿಟಿಷರಿಗೂ ಇಷ್ಟೊಂದು ಧೈರ್ಯವಿರಲಿಲ್ಲ. ನಮ್ಮ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು

Leave a Reply

Your email address will not be published. Required fields are marked *

error: Content is protected !!