ಸಿ.ಟಿ.ರವಿ, ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಟಿಪ್ಪು ಜಯಂತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕರಾದ ಸಿ.ಟಿ.ರವಿ ಮತ್ತು ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ದೂರು ದಾಖಲಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಟಿಪ್ಪು ಸುಲ್ತಾನ್ ಜಯಂತಿ ಕುರಿತು ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆ‍ಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧದ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

2017ರಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭದಲ್ಲಿ ಆಚರಣೆಯನ್ನು ಬಹಿಷ್ಕರಿಸುವ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರು. ಜೊತೆಗೆ 18 ನೇ ಶತಮಾನದ ಮೈಸೂರು ರಾಜ ಟಿಪ್ಪು ಸುಲ್ತಾನ್ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದ್ದ ದೂರನ್ನು ಕೆಳ ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿತ್ತು.

ಏನಿದು ಪ್ರಕರಣ?
2017ರಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿತ್ತು.  ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ‘ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಶ್ನೆ ಉದ್ಧವಿಸುತ್ತದೆ. ಸಿಆರ್‌ಪಿಸಿ 196 (1) ಮತ್ತು (1–ಎ) ಸೆಕ್ಷನ್‌ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಂಗೀಕರಿಸಿದೆ’ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತ್ತು.

‘ಈ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಕಾನೂನಿನ ಪ್ರಕಾರ ಹೊಸ ದೂರನ್ನು ಪರಿಗಣಿಸುವಂತೆ’ ತಿಳಿಸಿದೆ. ‘ಸಿ.ಟಿ. ರವಿ ಮತ್ತು ಅನಂತಕುಮಾರ ಹೆಗಡೆ ಅವರ ಟ್ವೀಟ್‌ಗಳು ಧರ್ಮಗಳ ನಡುವೆ ದ್ವೇಷ ಹೆಚ್ಚಿಸುತ್ತವೆ’ ಎಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ದೂರು ದಾಖಲಿಸಿದ್ದರು. ನ್ಯಾಯಾಲಯ 2017ರ ನವೆಂಬರ್ 4 ರಂದು ದೂರನ್ನು ವಜಾಗೊಳಿಸಿತ್ತು. ಟಿಪ್ಪು ಜಯಂತಿ ಆಚರಣೆಗಳ ಮೇಲೆ ಎರಡು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುವುದು ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿತ್ತು

Leave a Reply

Your email address will not be published. Required fields are marked *

error: Content is protected !!