ಶಿರ್ವ ಗ್ರಾ.ಪಂ ನೂತನ ಅಧ್ಯಕ್ಷ ಗ್ರೆಗೋರಿ ಕ್ಯಾಸ್ತಲಿನೊ ನಿಧನ
ಶಿರ್ವ: ಇತ್ತೀಚೆಗಷ್ಟೇ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗ್ರೆಗೋರಿ ಕೊರ್ನಾಡ್ ಕಾಸ್ತಲಿನೊ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಗ್ರೆಗರಿ, ಸಹಕಾರಿ ಸೊಸೈಟಿಯ ಅಧ್ಯಕ್ಷರಾಗಿ ಶಿರ್ವಾದಲ್ಲಿ ಸೇವೆ ಸಲ್ಲಿಸಿದ್ದರು.
ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾಗಿ ಐದನೇ ಬಾರಿ ವಿಜೇತರಾಗಿದ್ದ ಇವರು ಪ್ರಥಮ ಬಾರಿಯ ಎರಡುವರೇ ವರ್ಷಕ್ಕೆ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು. ಶಿರ್ವ ವ್ಯವಸಾಯಿಕ್ ಸಹಕಾರಿ ಸೊಸೈಟಿಯ ನಿಕಟ ಪೂರ್ವ ಅಧ್ಯಕ್ಷರಾಗಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಫಾ. ಮಹೇಶ್ ಡಿಸೋಜಾ ಅವರ ಅಭಿಮಾನಿ ಬಳಗದ ಪ್ರಮುಖರಾಗಿ, ಫಾ. ಮಹೇಶ್ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿದ ಪ್ರತಿಭಟನೆಯ ನೇತೃತ್ವವಹಿಸಿದ್ದರು.
ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ಪಕ್ಷದ ಹಿರಿಯ ನಾಯಕರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿ, ಬಿಜೆಪಿಯಿಂದ ಅಧ್ಯಕ್ಷ ಹುದ್ದೆಗೆ ಏರಿದ್ದರು.
ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು, ಶಿರ್ವ ಚರ್ಚ್ ಪಾಲನ ಮಂಡಳಿಯ ಸಕ್ರಿಯ ಸದಸ್ಯದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸೋಮವಾರ ಮಾರ್ಚ್ 1ರಂದು ಸಂಜೆ 4 ಗಂಟೆಗೆ ಶಿರ್ವ ದೇವಾಲಯದಲ್ಲಿ ನಡೆಯಲಿದೆ ಎಂದು ಮಾಹಿತಿ ಬಂದಿದೆ.