ಬೈಂದೂರು: ಕೊರೊನಾ ಬಳಿಕ ಆರ್ಥಿಕ ಬಿಕ್ಕಟ್ಟು ಸೃಷ್ಟಿ, ಜನರ ನೋವು ಆಲಿಸದ ಸರಕಾರ – ಡಿಕೆಶಿ

ಬೈಂದೂರು: ಕೊರೊನಾ ಸಂಕಷ್ಟದ ನಡುವೆ ಸರಕಾರ ಜನರ ನೋವಿಗೆಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಗಳು ಯಾಕೆ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೈಂದೂರಿನಲ್ಲಿ ನಡೆದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೆಜಮಾಡಿಯಿಂದ ಬೈಂದೂರು ತನಕ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನರ ಧ್ವನಿಯನ್ನು ಆಲಿಸುವಲ್ಲಿ ಸರ್ಕಾರವಿಂದು ವಿಫಲವಾಗಿದೆ. ದೇಶದಲ್ಲಿ ನಿರಂತರವಾಗಿ ರೈತರ ಹೋರಾಟ ನೆಡೆಯುತ್ತಿದ್ದರೆ ರೈತರಲ್ಲಿಗೆ ತೆರಳಿ ರೈತರ ಬೇಡಿಕೆ ಆಲಿಸಲು ಪ್ರಧಾನ ಮಂತ್ರಿಗಳಿಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನಧ್ವನಿ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಇದು ಜನರ ನೋವಿನ ಸಂಕೇತ. ಜನರು ಈಗ ನಿತ್ಯ ಅನುಭವಿಸುತ್ತಿರುವ ನೋವು-ಕಷ್ಟವನ್ನು ಈ ಪಾದಯಾತ್ರೆಯ ಮೂಲಕ ತೋರಿಸುತ್ತಿದ್ದಾರೆ. ಈ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ” ಎಂದರು.

“ಈ ಹಿಂದೆ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣಕ್ಕೆ ಒತ್ತು ನೀಡಿದ್ದರೆ ಇಂದಿನ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಪ್ರತಿಯೊಂದು ವೃತ್ತಿಯವರು ಆರು ತಿಂಗಳುಗಳ ಕೆಲಸ ಕಳೆದುಕೊಂಡರು. ಅವರ ನೋವಿಗೆ ಸರ್ಕಾರ ಸ್ಪಂದಿಸಲಿಲ್ಲ. ಕಳೆದ ಐದು ತಿಂಗಳಿಂದ ಮೀನುಗಾರರಿಗೆ ಡಿಸೇಲ್ ಸಬ್ಸಿಡಿ ಸಿಗುತ್ತಿಲ್ಲ. ಇದನ್ನು ಯಾರಲ್ಲಿ ಕೇಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಯಾಕೆ ಬೇಕು?” ಎಂದು ಕಟುವಾಗಿ ಪ್ರಶ್ನಿಸಿದರು. 

ಇಂದು ಕೇಂದ್ರ, ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರು, ಜನಸಾಮಾನ್ಯರ ಹಿತಾಸಕ್ತಿಯನ್ನು ಮರೆತು ವ್ಯವಹರಿಸುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೊರೊನಾ ಬಳಿಕ ಸರ್ಕಾರಗಳ ಕಿರುಕುಳ ಹೆಚ್ಚಾಗಿದ್ದು, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ  ಸರ್ಕಾರಗಳ ಜನವಿರೋಧಿ ಆಡಳಿತದಿಂದ ಜನ ಆಕ್ರೋಶಗೊಂಡಿದ್ದಾರೆ ಎಂದರು.

ಇದೇ ವೇಳೆ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ ಎಂದ ಅವರು, ಒಂದು ಕಾಲದಲ್ಲಿ ಈ ಭಾಗದಲ್ಲಿ ಹುಟ್ಟಿದ ಕಾಪೆರ್Çೀರೇಶನ್, ಸಿಂಡಿಕೇಟ್, ವಿಜಯಾ ಬ್ಯಾಂಕ್‍ಗಳನ್ನು ದಿ.ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ್ದರು. ಆದರೆ ಇಂದು ಆ ಬ್ಯಾಂಕ್‍ಗಳನ್ನು ಏಕಾಏಕಿ ವಿಲೀನ ಮಾಡುವ ಮೂಲಕ ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಬ್ಯಾಂಕ್‍ಗಳನ್ನೇ ಸಮಾಧಿ ಮಾಡಿದಿರಲ್ಲ ಎಂದು ಕೇಳಿದ್ದಾರೆ.

“ಜನಧ್ವನಿ ಪಾದಯಾತ್ರೆ ಎಲ್ಲ ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಎಂದ ಅವರು 2023 ರ ಚುನಾವಣೆಯಲ್ಲಿ ಮತ್ತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲಿದೆ ಎನ್ನುವ ನಂಬಿಕೆ ನನಗಿದೆ” ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ ಸೊರಕೆ, ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಎಂ.ಎ.ಗಫೂರ್, ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ರಾಜು ಪೂಜಾರಿ, ಮದನ್ ಕುಮಾರ್, ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!