ವಶಪಡಿಸಿಕೊಂಡ ಕಾರು ಪೊಲೀಸರಿಂದ ಮಾರಾಟ ಪ್ರಕರಣ: ಸಿಐಡಿ ತಂಡ ಮಂಗಳೂರಿಗೆ
ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಕಾರು ಪೊಲೀಸರು ಮಾರಾಟ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆಯನ್ನು ಆರಂಭಿಸಿದೆ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಕಾರನ್ನು ಸಿಸಿಬಿ ಪೊಲೀಸರು ಮಾರಾಟ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಸಿಐಡಿ ತಂಡ ಮಂಗಳೂರಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.
ಇದೀಗ ಪ್ರಕರಣದ ತನಿಖೆಯನ್ನು ಆರಂಭಿಸಿರುವ ಸಿಐಡಿ ಎಸ್ಪಿ ರೋಹಿಣಿ ಕಟ್ಟೋಚ್ ಅವರ ನೇತೃತ್ವದ ತಂಡ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಿದೆ. ಈ ವರದಿಯು ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಕೆಯಾಗಲಿದೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಹಿಂದಿನ ಪಿಎಸ್ಐ ಕಬ್ಬಳ್ ರಾಜ್, ನಾರ್ಕೋಟಿಕ್ ಠಾಣೆ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಬಿಐಯ ಆಶಿತ್ ಡಿಸೋಜ, ರಾಜ ಹಾಗೂ ಬ್ರೋಕರ್ ದಿವ್ಯದರ್ಶನ್ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಪ್ರಾಥಮಿಕ ಹಂತದ ತನಿಖೆಯನ್ನು ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರು ನಡೆಸಿದ್ದು, ಆ ವರದಿಯನ್ನು ಕಮಿಷನರ್ಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.