ಕಾರು ಮಾರಾಟ ಪ್ರಕರಣ: ಎಸ್ಐ ಕಬ್ಬಾಳರಾಜ್ ಸಹಿತ ಇಬ್ಬರ ಅಮಾನತು

ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಸೇರಿದ ಕಾರನ್ನು ಮಾರಾಟ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ ಬೆನ್ನಲ್ಲೇ ಆರೋಪ ಕೇಳಿಬಂದ ಇಬ್ಬರು ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಮಾನತುಗೊಳಿಸಿದ್ದಾರೆ. ಈ ಹಿಂದೆ ಮಂಗಳೂರು ಸಿಸಿಬಿ ತಂಡದಲ್ಲಿ ಎಸ್‍ಐ ಆಗಿದ್ದ ಕಬ್ಬಾಳರಾಜ್ ಮತ್ತು ಪಾಂಡೇಶ್ವರದ ಇಕನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಅಮಾನತು ಗೊಂಡಿರುವ ಪೊಲೀಸ್ ಅಧಿಕಾರಿಗಳು.

2020ರ ಅ. 16ರಂದು ಮಂಗಳೂರಿನ ನಾರ್ಕೋಟಿಕ್ ಠಾಣೆಯಲ್ಲಿ ದಾಖಲಾದ ಹಣ ಡಬ್ಲಿಂಗ್ ಜಾಲದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ, ಬಂಧಿತ ಇಬ್ಬರು ಆರೋಪಿಗಳಿಂದ ಸಿಸಿಬಿ ಪೊಲೀಸರ ತಂಡ ಆರೋಪಿಗಳಿಗೆ ಸೇರಿದ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದುಕೊಂಡಿತ್ತು.  ಈ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳನ್ನು ಪ್ರಕರಣದಿಂದ ಬಚಾವ್ ಮಾಡಲೆಂದು ಹಣ ಕೇಳಿದ್ದಾರೆ ಎನ್ನಲಾಗಿದ್ದು, ಹಣ ಇಲ್ಲದ್ದಕ್ಕೆ ಕಾರು ಮಾರಾಟ ಮಾಡುವಂತೆ ಡೀಲ್ ಆಗಿತ್ತು. ಇದೆಲ್ಲ ನಡೆದು ವಾರ ಕಳೆಯುವಷ್ಟರಲ್ಲಿ ಎಸ್‍ಐ ಕಬ್ಬಾಳರಾಜ್ ಮಂಗಳೂರಿನಿಂದ ಚಿಕ್ಕಮಗಳೂರಿಗೆ ವರ್ಗ ಆಗಿದ್ದರು. ಇವರಿಗೆ ಸಾಥ್ ನೀಡಿದ್ದಾರೆ ಎನ್ನಲಾಗಿದ್ದ ಅಂದಿನ ಕಮಿಷನರ್ ವಿಕಾಸ್ ಕುಮಾರ್ ಕೂಡ ವರ್ಗ ಆಗಿದ್ದರು. ಆದರೆ, ಕಾರು ಡೀಲಿಂಗ್ ಪ್ರಕರಣ ತಿಂಗಳ ನಂತರ ಲೀಕ್ ಆಗಿದ್ದು, ಈಗ ಮಂಗಳೂರು ಪೊಲೀಸರಿಗೆ ಭಾರೀ ಮುಜುಗರ ತಂದಿಟ್ಟಿದೆ.

ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ರಾಜ್ಯದ ಪೊಲೀಸ್ ವರಿಷ್ಠರಿಗೆ ವರದಿ ನೀಡಿದ್ದರು. ಅದರಂತೆ ಇಬ್ಬರು ಅಧಿಕಾರಿಗಳನ್ನು ಪ್ರಾಥಮಿಕ ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಹಣ ಡಬ್ಲಿಂಗ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಕಾರು ಡೀಲಿಂಗ್ ಪ್ರಕರಣದಲ್ಲಿ ಎಸಿಪಿ ದರ್ಜೆಯ ಒಬ್ಬ ಅಧಿಕಾರಿ ಮತ್ತು ಸಿಸಿಬಿಯಲ್ಲಿದ್ದ ಕೆಲವು ಅಧಿಕಾರಿಗಳ ಬಗ್ಗೆಯೂ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಾಗಲೇ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿದ್ದು ಇನ್ನೂ ಹಲವು ಅಧಿಕಾರಿಗಳ ಹೆಸರು ಕೇಳಿ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ

Leave a Reply

Your email address will not be published. Required fields are marked *

error: Content is protected !!