ಆಟೋ ಚಾಲಕರು ತಮ್ಮ ಸಮಸ್ಯೆಗಳ ನಡುವೆ ಸಮಾಜಮುಖಿಯಾಗಿ ದುಡಿಯುತ್ತಿರುವುದು ಶ್ಲಾಘನೀಯ: ಉದಯ್ ಕುಮಾರ್ ಶೆಟ್ಟಿ

ಉಡುಪಿ: ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆ ವತಿಯಿಂದ ರಿಕ್ಷಾ ಚಾಲಕರ ಸಂಘಟನೆಯ ಕ್ಷೇಮ ನಿಧಿ ಪ್ರಯುಕ್ತ ಲಕ್ಕಿ ಡ್ರಾ ಕಾರ್ಯಕ್ರಮ ಉಡುಪಿಯ ಚಿತ್ತರಂಜನ್ ಸರ್ಕಲ್ ಸಮೀಪದ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ 5 ಮಕ್ಕಳಿಗೆ ಸಹಾಯಧನವನ್ನು ವಿತರಿಸಲಾಯಿತು.

ಈ ವೇಳೆ, ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಿಕ್ಷಾ ಚಾಲಕರ ಸಂಘಟನೆಯ ಗೌರವಾಧ್ಯಕ್ಷ  ಹಾಗೂ ಮಂಗಳೂರು ವಿಭಾಗದ ಬಿಜೆಪಿ ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ನಿರ್ಧಿಷ್ಟ ಉದ್ದೇಶದಿಂದ ಆರಂಭಗೊಂಡ ಸಂಘಟನೆಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬೆಳೆದಾಗ ಅಂತಹ ಸಂಘಟನೆಗಳಿಗೆ ಪೂರಕವಾದ ಬೆಂಬಲ ಸಿಗುತ್ತದೆ. ನಾವೆಲ್ಲರೂ ಸಮಾಜದ ನಡುವೆ ಬದುಕುವವರು. ಆಟೋ ಚಾಲಕರು ತಮ್ಮ ನೋವುಗಳು, ಸಮಸ್ಯೆಗಳ ನಡುವೆ ಸಮಾಜದಲ್ಲಿ ಸಮಾಜಮುಖಿಯಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಸಮಾಜ ಸೇವಕ ವಿಶು ಶೆಟ್ಟಿ ಅವರು ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಲು ಸಿರಿವಂತರೇ ಆಗಬೇಕೆಂದೆನಿಲ್ಲ, ಸಮಾಜದಲ್ಲಿರುವ ಅಸಾಹಯಕರು ಹಾಗೂ
ಅಗತ್ಯ ಇರುವವರ ಕಷ್ಟವನ್ನು ಅರಿತು ತನ್ನ ಕೈಯಲ್ಲಾದ ಸೇವೆ ಮಾಡಿದರೂ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಆಟೋ ಚಾಲಕರ ಈ ಕಾರ್ಯ ಮೆಚ್ಚುವಂತದ್ದು. ಈ ಸಂಘಟನೆಯಿಂದ ಇಂತಹ ಕಾರ್ಯ ಇನ್ನಷ್ಟು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಸಂಘಟನೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಸಂದರ್ಭ ರಿಕ್ಷಾ ಚಾಲಕರ ಸಂಘದ ಕಾನೂನು ಸಲಹೆಗಾರ ಉಮೇಶ್ ಶೆಟ್ಟಿ ಕಳತ್ತೂರ್, ಆಟೋ ಸಂಘಟನೆಯ ಅಧ್ಯಕ್ಷ ರಾಜೇಶ್ ಬಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಠಲ ಜತ್ತನ್, ಕೋಶಾಧಿಕಾರಿ ಸ್ಟೇಲ್ಲೀ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!