ಕೇರಳದ ದೇವಾಲಯಕ್ಕೆ ಕರ್ನಾಟಕದ ಭಕ್ತ ರೂ.526 ಕೋಟಿ ದೇಣಿಗೆ: ಹಣ ಬಳಸಲು ಹಿಂದೇಟು

ತಿರುವನಂತಪುರ: ಕೇರಳದ ದೇವಾಲಯವೊಂದಕ್ಕೆ ಕರ್ನಾಟಕದ ಭಕ್ತರೊಬ್ಬರು ನೀಡಿದ ರೂ. 526 ಕೋಟಿ ದೇಣಿಗೆಯ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹಣದ ಮೂಲ ಮತ್ತು ವ್ಯಕ್ತಿಯ ವಿಶ್ವಾಸಾರ್ಹತೆಯ ಬಗ್ಗೆ ದೂರುಗಳು ಬಂದಿದ್ದರಿಂದ ಈ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಬಳಸಲು ಹಿಂದೇಟು ಹಾಕಿದೆ.

ಕೊಚ್ಚಿ ನಗರದಿಂದ ಸುಮಾರು 10 ಕಿಲೋ ಮೀಟರ್‌ ದೂರದಲ್ಲಿರುವ ಛೋಟ್ಟನಿಕ್ಕರ ಭಗವತಿ ದೇವಾಲಯಕ್ಕೆ ಕಳೆದ ವರ್ಷ ಚಿಕ್ಕಬಳ್ಳಾಪುರದ ಗಾನಾ ಶ್ರವಣ್‌ ಅವರು ಈ ಅಪಾರ ಮೊತ್ತದ ದೇಣಿಗೆ ನೀಡಿದ್ದರು. ₹526 ಕೋಟಿ ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಸೂಚಿಸಿದ್ದರು.

ಆದರೆ, ಶ್ರವಣ್‌ ಅವರು ನೀಡಿದ ಹಣದ ಮೂಲದ ಬಗ್ಗೆ ಹಲವು ದೂರುಗಳು ಸರ್ಕಾರಕ್ಕೆ ಮತ್ತು ದೇವಸ್ಥಾನದ ಆಡಳಿತ ಮಂಡಳಿಗೆ ಸಲ್ಲಿಕೆಯಾಗಿವೆ. ಹೀಗಾಗಿ, ಈ ಹಣದ ಮೂಲದ ಬಗ್ಗೆ ವಿವರ ಸಲ್ಲಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಶ್ರವಣ್‌ ಅವರಿಗೆ ಸೂಚಿಸಿದೆ.

ಚಿನ್ನ, ವಜ್ರ ಮತ್ತು ಅಪರೂಪದ ಲೋಹಗಳ ವ್ಯಾಪಾರದಲ್ಲಿ ತಾವು ತೊಡಗಿದ್ದು, ‘ಸ್ವಾಮೀಜಿ’ ಕಂಪನಿಗಳ ನಿರ್ದೇಶಕ ಎಂದು ಶ್ರವಣ್‌ ಮಾಹಿತಿ ನೀಡಿದ್ದಾರೆ.

‘ಹಣದ ಮೂಲದ ಬಗ್ಗೆ ವಿವರ ಸಲ್ಲಿಸಲು 60 ದಿನಗಳ ಸಮಯವನ್ನು ತೆಗೆದುಕೊಂಡಿದ್ದೇನೆ. ಆಧಾರರಹಿತ ದೂರುಗಳು ಮತ್ತು ಅನುಮಾನಗಳಿಂದಾಗಿ ದೇವಾಲಯದ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎಂದು ಶ್ರವಣ್‌ ತಿಳಿಸಿದ್ದಾರೆ.

‘ಛೋಟ್ಟನಿಕ್ಕರಾ ಭಗವತಿ ದೇವಾಲಯಕ್ಕೆ ಐದು ವರ್ಷಗಳ ಹಿಂದೆ ಭೇಟಿ ನೀಡಿದ್ದೆ. ನಂತರ ವ್ಯಾಪಾರದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಎಲ್ಲ ರೀತಿಯಿಂದ ಒಳ್ಳೆಯದಾಗಿದೆ. ಹೀಗಾಗಿ, ದೇವಸ್ಥಾನಕ್ಕೆ ದೇಣಿಗೆ ನೀಡಿದ್ದೇನೆ. ದೇವಸ್ಥಾನದ ನವೀಕರಣ, ಹೊಸ ಗೋಪುರಗಳ ನಿರ್ಮಾಣ, ಕಲ್ಯಾಣ ಮಂಟಪ, ತ್ಯಾಜ್ಯ ಸಂಸ್ಕರಣಾ ಘಟಕ, ಪಾರ್ಕಿಂಗ್‌ ಸೌಲಭ್ಯ ಮತ್ತು ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ದೇಣಿಗೆ ಹಣವನ್ನು ಬಳಸುವಂತೆ ಸೂಚಿಸಿದ್ದೇನೆ. ಆಸ್ಪತ್ರೆಯನ್ನು ಸಹ ನಿರ್ಮಿಸುವ ಉದ್ದೇಶವಿದೆ’ ಎಂದು ಶ್ರವಣ್‌ ವಿವರಿಸಿದ್ದಾರೆ.

‘ಇಲ್ಲಿ ನೋಂದಣಿಯಾಗಿರುವ ‘ಮುನ್ನಂಗಿ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ಮೂಲಕ ವಿದೇಶದಿಂದ ಹಣ ಜಮಾಯಿಸಲಾಗುತ್ತಿದೆ’ ಎಂದು ಶ್ರವಣ್‌ ತಿಳಿಸಿದ್ದಾರೆ.

ಶ್ರವಣ್‌ ಅವರ ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ವಿ.ಎ. ಶೀಜಾ ತಿಳಿಸಿದ್ದಾರೆ.

ಶ್ರವಣ್‌ ಅವರ ಹಣದ ಮೂಲ ಇನ್ನೂ ನಿಗೂಢವಾಗಿಯೇ ಉಳಿದಿದೆ. ಹಲವಾರು ದೂರುಗಳು ಸಹ ಬಂದಿರುವುದರಿಂದ ಎಚ್ಚರಿಕೆಯಿಂದ ಈ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಶ್ರವಣ ಅವರ ಜತೆ ಇತ್ತೀಚೆಗೆ ಮಾತುಕತೆ ನಡೆಸಿದ್ದ ಕೇರಳದ ದೇವಸ್ಥಾನ ಸಚಿವ ಕಡಕಂಪಳ್ಳಿ ಸುರೇಂದ್ರನ್‌, ಹೈಕೋರ್ಟ್‌ ಸಮ್ಮತಿ ನೀಡಿದ ಬಳಿಕ ದೇಣಿಗೆ ಮೊತ್ತವನ್ನು ವಿವಿಧ ಯೋಜನೆಗಳಿಗೆ ಬಳಸುವುದಾಗಿ ತಿಳಿಸಿದ್ದರು. 

Leave a Reply

Your email address will not be published. Required fields are marked *

error: Content is protected !!