ಐದು ವರ್ಷದಲ್ಲಿ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆ, 120 ಕೋಟಿ ಎಸಿಬಿ ವೆಚ್ಚ: ಕೆಆರ್ಎಸ್
ಬೆಂಗಳೂರು: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರಂಭವಾದ ದಿನದಿಂದ ಐದು ವರ್ಷಗಳ ಅವಧಿಯಲ್ಲಿ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ ಎಸಿಬಿಗಾಗಿ ಈ ಅವಧಿಯಲ್ಲಿ ₹120 ಕೋಟಿ ವೆಚ್ಚವಾಗಿದೆ!
ಎಸಿಬಿ ಕಾರ್ಯವೈಖರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಕಾರ್ಯಕಾರಿ ಸಮಿತಿ ಸದಸ್ಯ ಡಾ.ಕೆ. ಶಿವರಾಮ್ ಅವರು ಸಂಸ್ಥೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳನ್ನು ಪಕ್ಷದ ಮುಖಂಡರು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
‘2016–17ರಿಂದ 2020–21ರವರೆಗೆ ಎಸಿಬಿಗಾಗಿ ₹120 ಕೋಟಿ ವೆಚ್ಚ ಮಾಡಲಾಗಿದೆ. ಬೆಂಗಳೂರು ಕಚೇರಿಯೊಂದಕ್ಕೆ ₹ 60.57 ಕೋಟಿ ವೆಚ್ಚವಾಗಿದೆ. 1,445 ಪ್ರಕರಣಗಳನ್ನು ದಾಖಲಿಸಿ, ಇಷ್ಟು ಖರ್ಚು ಮಾಡಿದ್ದರೂ, ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ವಿಷಯದಲ್ಲಿ ಎಸಿಬಿಯಿಂದ ಸಾಧನೆಯೇನೂ ಆಗಿಲ್ಲ’ ಎಂದು ಶಿವರಾಮ್ ತಿಳಿಸಿದರು.
2016ರಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ 31 ಮತ್ತು ಸರ್ಕಾರದ ಸೇವೆ ಒದಗಿಸಲು ಲಂಚಕ್ಕೆ ಬೇಡಿಕೆ ಇಟ್ಟು, ಪಡೆದ ಆರೋಪದಡಿ 99 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪೈಕಿ ನಾಲ್ಕರಲ್ಲಿ ಮಾತ್ರ ಅಪರಾಧಿಗಳಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದೆ. ಉಳಿದ ಯಾವುದೇ ಪ್ರಕರಣಗಳೂ ಗುರಿ ಮುಟ್ಟಿಲ್ಲ ಎಂದರು.
‘ಜೆಸಿಬಿ (ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ) ಪಕ್ಷಗಳು ಒಟ್ಟಾಗಿ ಕ್ಲೋನಿಂಗ್ ವಿಧಾನದಲ್ಲಿ ಅಸ್ತಿತ್ವಕ್ಕೆ ತಂದ ಬಿಳಿಯಾನೆಯೇ ಎಸಿಬಿ. 2016ರಿಂದ ಈವರೆಗೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ 186, ಲಂಚ ಪಡೆದ ಆರೋಪದಡಿ 957 ಸೇರಿದಂತೆ 1,445 ಪ್ರಕರಣಗಳನ್ನು ದಾಖಲಿಸಲಾಗಿದೆ. ಎಸಿಬಿ ಬೆಂಗಳೂರು ನಗರ ಠಾಣೆಯಲ್ಲಿ 213 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಶೇ 1ರಷ್ಟು ಪ್ರಕರಣಗಳಲ್ಲೂ ಶಿಕ್ಷೆಯಾಗಿಲ್ಲ’ ಎಂದರು.
ಹಣ ಲೂಟಿಗೆ ದುರ್ಬಳಕೆ: ಕೆಆರ್ಎಸ್ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಮಾತನಾಡಿ, ‘ಎಸಿಬಿಯನ್ನು ಬೆದರು ಬೊಂಬೆಯಂತೆ ಬಳಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಮುಚ್ಚಿ ಹಾಕುವುದಕ್ಕೆ ಎಸಿಬಿ ಅಸ್ತಿತ್ವದಲ್ಲಿದೆ. 19,000ಕ್ಕೂ ಹೆಚ್ಚು ದೂರುಗಳು ಸಂಸ್ಥೆಗೆ ಬಂದಿದ್ದು, ಬಹುತೇಕ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ದೂರಿದರು.
ಲೋಕಾಯುಕ್ತ ಬಲಪಡಿಸಲಿ: ಹಲವು ಕಾರಣಗಳನ್ನು ನೀಡಿ ಭ್ರಷ್ಟರ ವಿರುದ್ಧದ ವಿಚಾರಣೆ ಕೈಬಿಡಲಾಗುತ್ತಿದೆ. ದೊಡ್ಡ ಹಗರಣಗಳ ಕುರಿತು ಮಾಹಿತಿ ಹೊರಬಿದ್ದರೂ ತನಿಖೆ ನಡೆಸುತ್ತಿಲ್ಲ. ನೇರವಾಗಿ ಸರ್ಕಾರದ ಹಿಡಿತದಲ್ಲೇ ಕೆಲಸ ಮಾಡುತ್ತಿರುವ ಎಸಿಬಿಯಿಂದ ಜನರಿಗೆ ನ್ಯಾಯ ದೊರಕುವುದಿಲ್ಲ ಹಿಂದಿನಂತೆ ಲೋಕಾಯುಕ್ತವನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿದವರು ಸಿದ್ದರಾಮಯ್ಯ. ಎಸಿಬಿ ಅವರ ಪಾಪದ ಕೂಸು. ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕಲೆಂದೇ ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು’ ಎಂದು ಕೆಆರ್ಎಸ್ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಆರೋಪಿಸಿದರು. ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತದ ಬಲವರ್ಧನೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದರು.