ಟೋಲ್ ಗೇಟ್ ನಲ್ಲಿ ವಿನಾಯಿತಿ ರದ್ದು- ಕೋಟ ಬಂದ್’ಗೆ ವ್ಯಾಪಕ ಬೆಂಬಲ
ಕೋಟ: ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಗೆ ಗುಂಡ್ಮಿ ಟೋಲ್ ಗೇಟ್‍ನಲ್ಲಿ ಟೋಲ್ ವಿನಾಯಿತಿಯನ್ನು ನಿರಾಕರಿಸುತ್ತಿರುವ ನವಯುಗ ಕಂಪೆನಿ ವಿರುದ್ದ ಹೆದ್ದಾರಿ ಜಾಗೃತಿ ಸಮಿತಿ ಇಂದು ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಈಗಾಗಲೇ ಬಂದ್‍ಗೆ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸುಮಾರು 90 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ಆರಂಭಿಸಿವೆ.
ಗುಂಡ್ಮಿ ಟೋಲ್ ಬಳಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಸಿರುವ ಪ್ರತಿಭನಾ ಕಾರರು, ಟೋಲ್ ಮಾಲೀಕರು ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಟೋಲ್ ಪಡೆಯಬಾರದು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರತಿಭನಾಕಾರರು, ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ, ಬೀದಿ ದೀಪ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಟೋಲ್ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿಲ್ಲ. ಹೀಗಿರುವಾಗ ಟೋಲ್ ನೀಡಿದರೂ ಹೆದ್ದಾರಿಯಲ್ಲಿ ಅಪಾಯದಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ವಿನಾಯಿತಿ ನೀಡಬೇಕಾಗಿದ್ದ ಕಂಪೆನಿ ಇದೀಗ ದಬ್ಬಾಳಿಕೆಯನ್ನು ನಡೆಸುತ್ತಿರೋದು ಸರಿಯಲ್ಲ. ಹೆದ್ದಾರಿಯ ತುಂಬೆಲ್ಲಾ ಬ್ಯಾರಿಕೇಡ್ ಅಳವಡಿಕೆ ಮಾಡಿರುವುದರಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಆದ್ದರಿಂದ ಈ ಕುರಿತು ಗಮನ ಹರಿಸಿ ಜಿಲ್ಲಾಡಳಿತ ಹಾಗೂ ಸರಕಾರಗಳು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಅಲ್ಲದೇ ಸ್ಥಳೀಯರಿಗೆ ಶಾಶ್ವತವಾಗಿ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.