ಶಾಲಾ ಶಿಕ್ಷಕ, ಬಿಜೆಪಿ ಮುಖಂಡ ಸಹಿತ ಮೂವರಿಂದ ಯುವತಿ ಮೇಲೆ ಅತ್ಯಾಚಾರ

ಭೋಪಾಲ್: ಮಧ್ಯ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಬೆಳಕಿಗೆ ಬಂದಿದ್ದು, 39 ವರ್ಷದ ಶಾಲಾ ಶಿಕ್ಷಕನೋರ್ವ 20ವರ್ಷದ ಯುವತಿಯನ್ನು ಸ್ಥಳೀಯ ರಾಜಕೀಯ ಮುಖಂಡ ಮತ್ತು ಸ್ನೇಹಿತನೊಂದಿಗೆ ಸೇರಿ ಗ್ಯಾಂಗ್ ರೇಪ್ ಮಾಡಿದ್ದಾನೆ.

ಮಧ್ಯ ಪ್ರದೇಶದ ವಿಂಧ್ಯಾ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಮನೆಗೆ ತೆರಳುತ್ತಿದ್ದಾಗ ಪ್ರಮುಖ ಆರೋಪಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಅವರ ಇಬ್ಬರು ಸಹಾಯಕರು ಸೇರಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ ಗೆ ಕರೆದೊಯ್ದು ಕೊಠಡಿಯಲ್ಲಿ ಆಕೆಯ ಮೇಲೆ ಒಬ್ಬರ ಮೇಲೊಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.  ಅತ್ಯಾಚಾರಕ್ಕೂ ಮುನ್ನ ಅಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದ್ದು ಬಳಿಕ ನಿರಂತರ 2 ದಿನಗಳ ಕಾಲ ಆಕೆಯ ಮೇಲೆರಗಿ ಅತ್ಯಾಚಾರ ಗೈದಿದ್ದಾರೆ. ಬಳಿಕ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಇನ್ನು ಈ ನಡುವೆ ಯುವತಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಳು. ಈ ಕುರಿತು ಭೀತಿಗೊಂಡ ಪೋಷಕರು ಜೈತ್ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ಸಲ್ಲಿಕೆ ಮಾಡಿದ್ದರು. ಬಳಿಕ ಯುವತಿ ಮನೆಗೆ ಬಂದಳು. ಆದರೆ ಯುವತಿ ಆಘಾತಗೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ನಡೆದ ಘಟನೆ ವಿವರಿಸಿದ್ದಾಳೆ.  ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯುವತಿಯಿಂದ ಪ್ರಾಥಮಿಕ ಮಾಹಿತಿ ಪಡೆದ ಪೊಲೀಸರು ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ  ಮೂವರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 342 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಶಹಾದೋಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅವಧೇಶ್ ಗೋಸ್ವಾಮಿ ಹೇಳಿದ್ದಾರೆ.

ಸ್ನೇಹವನ್ನೇ ದುರುಪಯೊಗ ಪಡಿಸಿಕೊಂಡ ಶಿಕ್ಷಕ
ಇನ್ನು ಸಂತ್ರಸ್ಥ ಯುವತಿ ಮತ್ತು ಶಾಲಾ ಶಿಕ್ಷಕ ರಾಜೇಶ್ ಶುಕ್ಲಾ ಪರಸ್ಪರ ಸ್ನೇಹಿತರಾಗಿದ್ದು, ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ರಾಜೇಶ್ ಸ್ನೇಹಿತರೊಂದಿಗೆ ಸೇರಿ ಕುಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!