ಕೇಂದ್ರ ಬಜೆಟ್ ಮುಂದಿನ 10 ವರ್ಷಗಳಿಗೆ ಪ್ರಭಾವ ಹೊಂದಿದೆ: ನಿರ್ಮಲಾ ಸೀತಾರಾಮನ್

ಬೆಂಗಳೂರು: ಕೇಂದ್ರ ಸರ್ಕಾರದ 2021-22ನೇ ಸಾಲಿನ ಕೇಂದ್ರ ಬಜೆಟ್ ಮುಂದಿನ ಹತ್ತು ವರ್ಷಗಳ ವರೆಗೆ ಪ್ರಭಾವ ಹೊಂದಿದ್ದು, ಸೂಕ್ತ ಮಾರ್ಗ ನಕ್ಷೆ ರೂಪಿಸಲಿದೆ. ಜತೆಗೆ ಎಲ್ಲಾ ವಲಯಗಳು ಅಭಿವೃದ್ಧಿಯಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳೀದ್ದಾರೆ.

ನಗರದಲ್ಲಿಂದು ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ನ ಉದ್ಯಮಿಗಳೊಂದಿಗೆ ಬಜೆಟ್ ಸಂಬಂಧಿಸಿದಂತೆ ಸಂವಾದ ನಡೆಸಿದ ಅವರು, ಬಜೆಟ್ ಕಾರ್ಯಕ್ರಮಗಳು ಪರಿಣಾಮಕಾರಿಯಾಗಲಿದ್ದು ವಿತ್ತೀಯ ಕೊರತೆಯನ್ನು ಆರೊಗ್ಯಕರ ಮಟ್ಟದಲ್ಲಿ ಕಾಯ್ದುಕೊಳ್ಳುವ ಗುರಿ ಹೊಂದಿದೆ ಎಂದರು.

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಭಾರತ ಸರ್ಕಾರ ಖಾಸಗಿ ಕ್ಷೇತ್ರಕ್ಕೆ ಉತ್ತಮವಾದ ರೀತಿಯಲ್ಲಿ ಸೌಲಭ್ಯಗಳನ್ನು ನೀಡದೇ ಇದ್ದಿದ್ದರೆ ದೇಶವು ಬಹುದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿತ್ತು ಎಂದು ಹೇಳಿದರು.

ಕೋವಿಡ್ ಲಸಿಕೆ ಅಭಿವೃದ್ಧಿಗೆ ಖಾಸಗಿ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಈ ವಲಯ ಇಡೀ ಜಗತ್ತು ನಮ್ಮ ಕಡೆಗೆ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಲಸಿಕೆಗಳನ್ನು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸುವ ಮೂಲಕ ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ ಎಂದು ಹೇಳಿಕೊಂಡರು.

ಸರ್ಕಾರದ ಬೆಂಬಲದಿಂದ ಖಾಸಗಿ ಕ್ಷೇತ್ರ ಹೇಗೆ ಒಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬುದಕ್ಕೆ ಈ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆಗಳು ಮತ್ತು ಬೇಡಿಕೆಗಳನ್ನು ಪೂರೈಸಲು ಕೇವಲ ಸರ್ಕಾರಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳ ಜತೆಗೆ ಖಾಸಗಿ ಕ್ಷೇತ್ರಗಳ ಪಾಲುದಾರಿಕೆ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರು. 

ಖಾಸಗಿ ಕ್ಷೇತ್ರ ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇದ್ದರೆ ಅಥವಾ ಈ ಕ್ಷೇತ್ರಕ್ಕೆ ಉತ್ತಮವಾದ ಸಹಕಾರ ದೊರೆಯದಿದ್ದರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ಬಾರಿಯ ಬಜೆಟ್ ನಲ್ಲಿ ದೇಶದ ಉನ್ನತಿಗೆ ಪೂರಕವಾದ ಯೋಜನೆಗಳು ಮತ್ತು ಪ್ಯಾಕೇಜ್ ಗಳನ್ನು ಪ್ರಕಟಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಈ ಸಂವಾದದಲ್ಲಿ ಉದ್ಯಮಿಗಳಾದ ಅಜೀಂ ಪ್ರೇಮ್ ಜಿ, ಡಾ.ದೇವಿಶೆಟ್ಟಿ, ಮೋಹನ್ ದಾಸ್ ಪೈ, ಬಿಸಿಐಸಿ ಅಧ್ಯಕ್ಷ ಟಿ ಆರ್ ಪರಶುರಾಮನ್, ರವಿ ರಾಘವನ್ ಮತ್ತಿತರೆ ಉದ್ಯಮಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!