ಮುಖ್ಯಮಂತ್ರಿಗಳೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ: ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಮುಖ್ಯಮಂತ್ರಿಯವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ನಿಮ್ಮ ನಾಟಕ ತಂಡದ ಬಗ್ಗೆ ತಮಗೂ ತಿಳಿದಿದೆ. ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮೀಸಲಾತಿ ನೀಡಿ ಇಲ್ಲದಿದ್ದಲ್ಲಿ ಕುರ್ಚಿ ಖಾಲಿ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಬಸನಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ನಾವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಧ್ಯಕ್ಕೆ ಇಲ್ಲ, ಸ್ವಲ್ಪ ದಿನ ಕಾಯಿರಿ ನಾವು ಅಲ್ಲಿಗೆ ತಲುಪುತ್ತೇವೆ. ಅಂತೆಯೇ ನಮಗೂ ಒಂದು ಕಾಲ ಬರಲಿದೆ. ಬಳಿಕ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಪಂಚಮ ಸಾಲಿಗಳ ಪಂಚಲಕ್ಷ ಹೆಜ್ಜೆಗಳು, 2ಎ ಮೀಸಲಾತಿಗಾಗಿ ಹೋರಾಟ ಕುರಿತ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ. ನೋಟಿಸ್ ಕೊಟ್ಟು ಯತ್ನಾಳ್ ಅವರನ್ನು ಬೆದರಿಸಿದರೆ ಅದಕ್ಕೆಲ್ಲಾ ಅಂಜುವ ಮಗ ನಾನಲ್ಲ. ಆದಷ್ಟು ಬೇಗ ನಿಮ್ಮ ಕುರ್ಚಿ ಖಾಲಿ ಮಾಡಿಸಬೇಕಾಗುತ್ತದೆ ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಸಂದೇಶ ನೀಡಿದ್ದಾರೆ.

ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದೆ. ನಾನು ಸರ್ಕಾರದಲ್ಲಿ ಶಾಸಕ ಆಗಿದ್ದೇನೆ. ಯತ್ನಾಳ್ ನ ಬೆದರಿಸುತ್ತೇವೆ ಎಂದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗುತ್ತದೆ. 3ಬಿ ನಾವು ಕೊಟ್ಟೆವು ಎನ್ನುತ್ತಾರೆ ಆದರೆ ಎಲ್ಲಾ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಸರ್ಕಾರಕ್ಕೆ ಮನವಿ ಕೊಟ್ಟು ಕೊಟ್ಟು  ಸಾಕಾಗಿದೆ.ಈಗ ಮನವಿ ನೀಡುತ್ತಿಲ್ಲ. ಬದಲಿಗೆ ಮೀಸಲಾತಿ ತಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದರು.

ಮೀಸಲಾತಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರೆ  25 ಸಂಸದರನ್ನು ಕರೆದುಕೊಂಡು ದೆಹಲಿಗೆ ಹೋಗಿ ಮೀಸಲಾತಿ ಕೇಳಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ನಾನು ಅಲ್ಲಿಗೆ ಏಕೆ ಹೋಗಲಿ. ನಿಮ್ಮಕಡೆ ಬೀಗದ ಕೈ ಇಟ್ಟುಕೊಂಡು ಮತ್ತೊಬ್ಬರ ಕಡೆ ಕೈ ತೋರಿಸಿದರೆ ನಾವೇಕೆ ಹೋಗಬೇಕು ಎಂದು ಯಡಿಯೂರಪ್ಪ ಅವರಿಗೆ ಬಿಸಿ ಮುಟ್ಟಿಸಿದರು.ದೆಹಲಿಗೆ ಹೋಗಬೇಕು ಅಂದರೆ ವೀರಶೈವ ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕಾದಲ್ಲಿ ನಾವು ದೆಹಲಿಗೆ ಹೋಗುತ್ತೇನೆ ಎಂದು  ಯತ್ನಾಳ್ ಮಾತಿನ ಚಾಟಿ ಬೀಸಿದರು.

ನಾನು ಮಾತನಾಡುವಾಗ ಮಳೆ ನಿಂತಿದೆ. ಹನುಮಂತ ಹಾಗೂ ವರಣ ದೇವನಿಗೆ ಪ್ರಾರ್ಥನೆ ಮಾಡಿಕೊಂಡೆ. ನನ್ನ ಬೇಡಿಕೆ ಸತ್ಯವಾಯಿತು. ನಾನು ಬೋಗಸ್ ರಾಜಕಾರಣಿ ಅಲ್ಲ, ಯಾರಿಗೂ ಪಂಪ್ ಹೊಡೆಯಲ್ಲ, ಮಂತ್ರಿ ಆಗಬೇಕಿಲ್ಲ, ನಾನು ಮಂತ್ರಿ ಅಲ್ಲ, ಅವರಪ್ಪ ಆಗಿದ್ದೇನೆ ಎಂದು ಕಿಡಿಕಾರಿದರು. ಗೃಹ ಸಚಿವ ಬೊಮ್ಮಾಯಿ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಬೇರೆಯವರಿಗೆ ಕೊಟ್ಟಂತೆ ನನಗೆ ಭರವಸೆ ಕೊಡಬೇಡಿ. ನಿಮ್ಮ ವಿಧಾನ ಸಭಾ ಕ್ಷೇತ್ರ ಶಿಗ್ಗಾವಿಯಲ್ಲಿ 50 ಸಾವಿರ ಪಂಚಮಸಾಲಿ ಜನ ಇದಾರೆ, ಭರವಸೆ ಕೊಡುವಾಗ ಎಚ್ಚರಿಯಿಂದ ಕೊಡಿ ಎಂದು ಗೃಹ ಸಚಿವರಿಗೂ ಎಚ್ಚರಿಕೆ ನೀಡಿದರು.

ವೀರಶೈವ ಲಿಂಗಾಯತ ಎಲ್ಲಾ ಮಠಾಧೀಶರು ನಮಗೆ ಬೆಂಬಲ ಕೊಟ್ಟಿದ್ದಾರೆ. ಗುರು-ವಿರಕ್ತ ಮಠಾಧೀಶ ರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಸಿಸಿ ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಇಬ್ಬರು ಮಂತ್ರಿಗಳಿಗೆ ನಾವು ಮನವಿ ಮಾಡುತ್ತಿದ್ದೇವೆ. ನಾವು ಮಾರ್ಚ್ 4 ರಂದು ಧರಣಿ ಮಾಡಿಯೇ ತೀರುತ್ತೇವೆ. ಮಾರ್ಚ್ 4 ರಂದು ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ನಾನು  ಎದ್ದು ನಿಲ್ಲುತ್ತೇನೆ. ಮುಖ್ಯಮಂತ್ರಿಗಳು ನನ್ನ ಬೇಡಿಕೆಗೆ ಸದನದಲ್ಲಿ ಉತ್ತರ ನೀಡಲೇಬೇಕು. ಇಲ್ಲದೇ ಇದ್ದಲ್ಲಿ ನೀವಿಬ್ಬರು ಸಚಿವರು ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಿಗಮ ಮಂಡಳಿ ಅಧ್ಯಕ್ಷರು ಕೂಡ ರಾಜೀನಾಮೆ ಕೊಡಬೇಕು.ನಮ್ಮ ಸಮುದಾಯವರಿಗೆ ಸಣ್ಣ ಖಾತೆ ಕೊಟ್ಟು ಮೂಗಿಗೆ ಬೆಣ್ಣೆ ಸವರುತ್ತಾರೆ. ಸಿ.ಸಿ.ಪಾಟೀಲ್ ಗೆ ಇಂಧನ ಖಾತೆ, ನಿರಾಣಿಗೆ ಕಂದಾಯ ಖಾತೆ ನೀಡಿ ಎಂದು ಇದೇ ವೇಳೆ ಯತ್ನಾಳ್  ಒತ್ತಾಯಿಸಿದರು.ಈ ಅಧಿವೇಶನ ಮುಗಿಯುವ ಒಳಗೆ ಘೋಷಣೆ ಮಾಡದೇ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಸರ್ಕಾರಕ್ಕೆ ಗಡವು ನೀಡಿದರು.

ಯಡಿಯೂರಪ್ಪ ನೀವು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು.ಎಲ್ಲವೂ ನಿಮ್ಮ ಕೈಯಲ್ಲಿಯೇ ಇದೆ ಆದರೆ ನಿಮಗೆ ಮೀಸಲಾತಿ ನೀಡುವ ಮನಸ್ಸಿಲ್ಲ. ನಿಮ್ಮ ಜಾತಿಗಾದರೆ ತಕ್ಷಣ ಮೀಸಲಾತಿ ಕೊಟ್ಟಿದ್ದೀರಿ. ಆಗ ಯಾವ ಅಧ್ಯಯನ ನಡೆಸಲಾಗಿತ್ತು. ಯಾವ ಸಮಿತಿ ವರದಿ ಪಡೆದುಕೊಂಡಿದ್ದೀರಿ. ನಮಗೆ ಯಾಕೆ ಮೀಸಲಾತಿ ಕೊಡುತ್ತಿಲ್ಲ. ಕೇಳಿದರೆ ಪ್ರಾಣ ಕೊಡುತ್ತೇವೆ ಎನ್ನುತ್ತಾರೆ. ನಮಗೆ ಯಾರ ಪ್ರಾಣ ಬೇಕಿಲ್ಲ 2ಎ ಮೀಸಲಾತಿ ಕೊಡಿ  ಸಾಕು. ಇಲ್ಲವಾದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲವೆಂದು ಬಹಿರಂಗವಾಗಿ ಹೇಳಿ. ಮೀಸಲಾತಿ ಹೇಗೆ ಪಡೆದುಕೊಳ್ಳಬೇಕೆಂದು ನಮಗೆ ತಿಳಿದಿದೆ ಎಂದು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ತಿರುಗೇಟು ನೀಡಿದರು.

ಮಾತು ಮುಗಿಸಲು ಮುಂದಾಗುತ್ತಿದ್ದಂತೆ ಸಮುದಾಯದ ಜನರು ಭಾಷಣ ಮುಂದುವರೆಸುವಂತೆ ಪಟ್ಟು ಹಿಡಿದರು. ಆಗ ನಾನು ಮಾತನಾಡಿದ್ದು ಸಾಕು. ಮಾತನಾಡುವುದು ಇನ್ನು ಬಹಳ ಇದೆ. ಮುಂದುವರೆದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ. ಅದಕ್ಕೆ ನೋಟಿಸ್ ಕೊಟ್ಟು ಕೆಣಕುತ್ತಿದ್ದಾರೆ ಎಂದು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ಜನರ ಗಮನಕ್ಕೆ ತಂದರು.

Leave a Reply

Your email address will not be published. Required fields are marked *

error: Content is protected !!