ವೈದ್ಯ ಕಾಲೇಜುಗಳ ಸೀಟು ಬ್ಲಾಕಿಂಗ್ ದಂಧೆ: ರೂ.402 ಕೋಟಿ ಅಕ್ರಮ ಆದಾಯ
ಬೆಂಗಳೂರು: ರಾಜ್ಯದ ಕೆಲವು ಖಾಸಗಿ ವೈದ್ಯ ಕಾಲೇಜುಗಳು ಸೀಟು ಬ್ಲಾಕಿಂಗ್ ದಂಧೆ ಮೂಲಕ ಒಟ್ಟು ರೂ.402.78 ಗಳಷ್ಟು ಅಕ್ರಮ ಆದಾಯ ಗಳಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಕಾಲೇಜಿನ ಟ್ರಸ್ಟಿಗಳು, ಮಾಲೀಕರು, ನಿರ್ದೇಶಕರ ನಿವಾಸ, ಕಚೇರಿ ಸೇರಿ 56 ವಿವಿಧ ಸ್ಥಳದಲ್ಲಿ ಬುಧವಾರ ಹಾಗೂ ಗುರುವಾರ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಕೋಟ್ಯಾಂತ್ರ ರೂಪಾಯಿ ಮೌಲ್ಯದ ಚಿನ್ನಾಭರಣ, ವಿದೇಶದಲ್ಲಿರುವ ಬೇನಾಮಿ ಆಸ್ತಿ, ಶೈಕ್ಷಣಿಕ ಸಂಸ್ಥೆ ಹೆಸರಿನಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ದಾಖಲೆಯನ್ನು ಜಪ್ತಿ ಮಾಡಲಾಗಿದೆ. ರೂ.30 ಕೋಟಿ ಮೌಲ್ಯದ 81 ಕೆಜಿ ಚಿನ್ನಾಭರಣ, ರೂ.15.09 ಕೋಟಿ ನಗದು, 50 ಕ್ಯಾರೆಟ್ ವಜ್ರ, 40 ಕೆಜಿ ಬೆಳ್ಳಿ, ರೂ.2.39 ಕೋಟಿ ಬೇನಾಮಿ ಆಸ್ತಿ, ಬೇನಾಮಿ ಹೆಸರಿನಲ್ಲಿ ಖರೀದಿಸಿರುವ 35 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾಲೇಜುಗಳು ಡೊನೇಷನ್ ರೂಪದಲ್ಲಿ ಗಳಿಸಲಾಗಿದ್ದ ರೂ.402.78 ಕೋಟಿ ಅಕ್ರಮ ಆದಾಯ ಪತ್ತೆಯಾಗಿದೆ. ಆರೋಪಿತ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರಿ ಪ್ರಮಾಣದ ಆದಾಯವನ್ನು ಘೋಷಣೆ ಮಾಡದೇ ತೆರಿಗೆ ವಂಚಿಸಿರುವುದಕ್ಕೂ ಸಾಕ್ಷ್ಯಗಳು ಲಭಿಸಿವೆ ಎಂಬ ಮಾಹಿತಿಯನ್ನು ಐ.ಟಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಹೆಚ್ಚಿನ ರ‍್ಯಾಂಕಿಂಗ್ ಪಡೆದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸೀಟು ಕಾಯ್ದಿರಿಸಿ, ಅವುಗಳನ್ನು ಕಡಿಮೆ ರ‍್ಯಾಂಕಿಂಗ್ ಪಡೆದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಎಂಬಿಬಿಎಸ್, ದಂತ ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಹಣ ಪಡೆದು ಸೀಟು ಹಂಚಿಕೆ ಮಾಡಿರುವುದು ದೃಢಪಟ್ಟಿದೆ. ವಿದ್ಯಾರ್ಥಿಗಳಿಂದ ನಗದು ಪಡೆದಿರುವುದಕ್ಕೆ ಸಂಬಂಧಿಸಿದ ಮಾಹಿತಿಯುಳ್ಳ ನೋಟ್ ಪುಸ್ತಕಗಳು, ಡೈರಿಗಳು, ಎಕ್ಸೆಲ್ ಶೀಟ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ಸಂಗ್ರಹಿಸಿದ ಭಾರಿ ಮೊತ್ತದ ಹಣವನ್ನು ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಒಂದು ಸಂಸ್ಥೆಯಲ್ಲಿ ಆಡಳಿತ ಮಂಡಳಿ ಕೋಟಾದಲ್ಲಿ ಸೀಟು ಪಡೆದ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸುವುದಕ್ಕೆ ‘ಪ್ಯಾಕೇಜ್’ ವ್ಯವಸ್ಥೆ ಇರುವುದೂ ಪತ್ತೆಯಾಗಿದೆ. ರೂ. 1 ಲಕ್ಷದಿಂದ ರೂ. 2 ಲಕ್ಷದವರೆಗೂ ‘ಪ್ಯಾಕೇಜ್’ ದರವಿದೆ. ಈ ಮೊತ್ತ ನೀಡಿದ ವಿದ್ಯಾರ್ಥಿಗಳನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಪಾಸು ಮಾಡುವ ವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ.