ಉದ್ಯಾವರ ಪಂಚಾಯತ್ ಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ-ಅಧ್ಯಕ್ಷ ಹಾಗೂ ಸದಸ್ಯರ ಬೆಂಬಲ
ಉದ್ಯಾವರ: ಪಿತ್ರೋಡಿಯಲ್ಲಿ ಹೊಸ ಕೈಗಾರಿಕಾಗೆ ಪರವಾನಿಗೆ ನೀಡಿರುವುದಕ್ಕಾಗಿ ಪಕ್ಷಾತೀತವಾಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ನಾಗರಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಉದ್ದಿಮೆ ದಾರರಿಗೆ ಪರವಾನಿಗೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಮಾತನಾಡಿ, ಕೈಗಾರಿಕಾ ಉದ್ದಿಮೆಗೆ ಅವಕಾಶ ನೀಡಿರುವುದಕ್ಕೆ ವಿರೋಧಿಸಿ, ಸಾರ್ವಜನಿಕ ಹಿತ ದೃಷ್ಟಿಯಿಂದ ಗ್ರಾಮ ಪಂಚಾಯತ್ ಗೆ ಬೀಗ ಜಡಿದಿರುವುದಕ್ಕೆ ಪಕ್ಷಾತೀತ ವಾಗಿ ಬೆಂಬಲ ಸೂಚಿಸಿದ್ದೇವೆ. ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳು ಶೀಘ್ರವಾಗಿ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿಯವರೆಗೆ ಗ್ರಾಮ ಪಂಚಾಯತ್ ನ್ನು ತೆರೆಯುವುದಿಲ್ಲ ಎಂದು ತಿಳಿಸಿದರು.
ಸಾಮಾನ್ಯ ಜನರ ಉದ್ದಿಮೆಗಳಿಗೆ ಪರವಾನಗಿ ನೀಡಲು ತಿಂಗಳುಗಟ್ಟಲೆ ಕಾಯಿಸುವ ಅಧಿಕಾರಿಗಳು ಕೈಗಾರಿಕಾ ಉದ್ದಿಮೆಗೆ ಕೇವಲ ಅರ್ಧಗಂಟೆಯಲ್ಲಿ ಪರವಾನಿಗೆ ಕೊಟ್ಟದ್ದಾದರೂ ಹೇಗೆ ? ಎಂದು ಪ್ರಶ್ನಿಸಿದ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರು, ಗ್ರಾಮಸ್ಥರಿಗೆ ಸಮಸ್ಯೆ ಇರುವ ಯೋಜನೆಗೆ ಯಾವುದೇ ನಿರ್ಣಯ ಇಲ್ಲದೆ ಅವಕಾಶ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ಉದ್ದಿಮೆಗೆ ಅವಕಾಶ ನೀಡಿದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದರು.
ಕೈಗಾರಿಕಾ ವಲಯ ಪರಿವರ್ತನೆ ಮಾಡದಂತೆ 2015 ರಿಂದ ಹೋರಾಟ ನಡೆಸುತ್ತಿದ್ದೇವೆ. ಇದಕ್ಕೆ ಅಪಾರ ಬೆಂಬಲ ಕೂಡಾ ಸಿಕ್ಕಿತ್ತು. ಗ್ರಾಮ ಸಭೆಯಲ್ಲಿ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಎಂದು ನಿರ್ಣಯ ಇದ್ದರೂ ಕೂಡಾ ಆಡಳಿತ ಅಧಿಕಾರಿಯವರು ಯಾರ ಗಮನಕ್ಕೂ ತಾರದೆ ಹೊಸ ಕೈಗಾರಿಕಾ ಉದ್ದಿಮೆ ಗೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಅನುಮಾನ ಗೊಂಡು ದಾಖಲೆಗಳನ್ನು ಪರಿಶೀಲಿಸಿದಾಗ ಕೈಗಾರಿಕೆಗೆ ಅವಕಾಶ ನೀಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಂದು ಗ್ರಾಮ ಪಂಚಾಯತ್ ನ್ನು ಬಂದ್ ಮಾಡಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೈಗಾರಿಕಾ ಉದ್ದಿಮೆ ಗೆ ನೀಡಿರುವ ಪರವಾಣಿಗೆಯನ್ನು ರದ್ದುಗೊಳಿಸಬೇಕು ಹಾಗೂ ಪರವಾನಗಿ ಕೊಟ್ಟಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಆಗ್ರಹಿಸಿದರು.
ಹೈಕೋರ್ಟ್ ನಲ್ಲಿರುವ ದಾವೆಯನ್ನು ವಿತ್ ಡ್ರಾ ಮಾಡಿ ತರಾತುರಿಯಲ್ಲಿ ಅರ್ಜಿಯನ್ನು ವಿಲೇವಾರಿ ನಡೆಸಿ ಅದೇ ದಿನ ಸಂಜೆ ಪರವಾನಿಗೆ ನೀಡಿದ್ದಾರೆ. ಕಾನೂನು ಬಾಹೀರವಾಗಿ ನೀಡಿದ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಈ ರೀತಿಯ ಗ್ರಾಮ ಪಂಚಾಯತ್ ನಲ್ಲಿ ನಾವು ಕೆಲಸ ಮಾಡಿದರೆ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದೇವೆ ಎಂಬ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಈ ಬಗ್ಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಊರವರ ನಿರ್ಧಾರಕ್ಕೆ ಬದ್ದರಾಗಿದ್ದು , ನ್ಯಾಯಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ದರಿದ್ದು ತಮ್ಮ ಹುದ್ದೆಗೆ ರಾಜಿನಾಮೆ ನೀಡಲೂ ಸಿದ್ದರಿದ್ದೇವೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಧುಲತಾ ಶಶಿಧರ್, ಸದಸ್ಯರಾದ ರಿಯಾಝ್ ಪಳ್ಳಿ, ಲೋರೆನ್ಸ್ ಡೇಸಾ, ಯೋಗೀಶ್ ಕೋಟ್ಯಾನ್, ರಮಾನಂದ, ಸಚಿನ್ ಸಾಲ್ಯಾನ್, ಮಿತೇಶ್ ಸುವರ್ಣ, ದಿವಾಕರ ಬೊಳ್ಜೆ, ಚೇತನ್ ಪಿತ್ರೋಡಿ, ಆಶಾ ಸುರೇಶ್, ಜುಡಿತ್ ಪಿರೇರಾ, ಆಬಿದ್ ಅಲಿ, ಗಿರೀಶ್ ಸುವರ್ಣ, ಫ್ರಿಡಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು