ಭಯೋತ್ಪಾದನೆ, ಹಿಂಸಾಚಾರ ಹರಡುತ್ತಿರುವವರಲ್ಲಿ ವಿದ್ಯಾವಂತರೆ ಹೆಚ್ಚು: ಪ್ರಧಾನಿ ಮೋದಿ
ನವದೆಹಲಿ: ಒಂದೆಡೆ ಭಯೋತ್ಪಾದನೆ ಮತ್ತು ಹಿಂಸೆಯನ್ನು ಜಗತ್ತಿನಾದ್ಯಂತ ಹಬ್ಬಿಸುವ ಕಾರ್ಯದಲ್ಲಿ ಅಧಿಕ ವಿದ್ಯಾವಂತರು, ಕೌಶಲ್ಯವಂತರು ನಿರತರಾಗಿದ್ದಾರೆ. ಮತ್ತೊಂದೆಡೆ, ಇನ್ನೊಂದು ವರ್ಗದ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆಸ್ಪತ್ರೆಗಳಲ್ಲಿ, ಪ್ರಯೋಗಾಲಯಗಳಲ್ಲಿ ಕೋವಿಡ್-19 ಸೋಂಕಿನಿಂದ ಜನರನ್ನು ರಕ್ಷಿಸಲು ಸೇವಾ ನಿರತರಾಗಿದ್ದಾರೆ. ಇದು ಅವರ ತತ್ವ, ಸಿದ್ಧಾಂತಗಳನ್ನು ತೋರಿಸುತ್ತಿಲ್ಲ, ಬದಲಿಗೆ ಮನೋಧರ್ಮವನ್ನು ಹೇಳುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ನಿಮ್ಮ ಮನಸ್ಸು ಸಕಾರಾತ್ಮಕವಾಗಿದೆಯೇ, ಋಣಾತ್ಮಕವಾಗಿದೆಯೇ ಎಂಬುದರ ಮೇಲೆ ನೀವು ಮಾಡುವ ಕೆಲಸ ಅವಲಂಬಿತವಾಗಿರುತ್ತದೆ. ಇಲ್ಲಿ ಇಬ್ಬರಿಗೂ ಅವಕಾಶವಿದೆ. ಎರಡೂ ಗುಣದ ವ್ಯಕ್ತಿಗಳಿಗೆ ದಾರಿಯಿದೆ. ನಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಪರಿಹಾರ ಹುಡುಕುವವರಾಗಬೇಕೆ ಎಂಬುದನ್ನು ತೀರ್ಮಾನಿಸುವುದು ನಮ್ಮ ಕೈಯಲ್ಲಿದೆ ಎಂದರು.
ನೂತನ ಶಿಕ್ಷಣ ನೀತಿ: ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಪ್ರಮುಖ ಹೆಜ್ಜೆಯಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಅದು ಶಕ್ತಿಯನ್ನು ನೀಡುತ್ತದೆ. ಲಿಂಗ ಸೇರ್ಪಡೆ ನಿಧಿಯನ್ನು ಹೊಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ‘ಆತ್ಮನಿರ್ಭರ ಭಾರತ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್ ಧನ್ ಕರ್ ಮಾತನಾಡಿ, ವಿಶ್ವಗುರುವಾಗುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ನಮ್ಮ ಪಯಣವನ್ನು ಹೆಚ್ಚಿಸುತ್ತದೆ. ಶಿಕ್ಷಣ ಸುಧಾರಣೆ ನಿಟ್ಟಿನಲ್ಲಿ ಶಿಕ್ಷಣ ನೀತಿ ಬದಲಾವಣೆಗೆ ನಾಂದಿ ಹಾಡಲಿದೆ ಎಂದರು.