ತೆಂಕುತಿಟ್ಟು ಯಕ್ಷಗಾನದ ಸಿಡಿಲಮರಿ ಖ್ಯಾತಿಯ ಡಾ.ಶ್ರೀಧರ ಭಂಡಾರಿ ವಿಧಿವಶ
ಮಂಗಳೂರು: ತೆಂಕುತಿಟ್ಟು ಯಕ್ಷಗಾನದಲ್ಲಿ ಸಿಡಿಲಮರಿ ಎಂದೇ ಖ್ಯಾತಿ ಪಡೆದಿದ್ದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ ಭಂಡಾರಿ (73) ಅವರು ವಿಧಿವಶರಾಗಿದ್ದಾರೆ.
ಒಂದು ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಇವರು, ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದ ಶ್ರೀಧರ ಭಂಡಾರಿ ಅವರು ಯಕ್ಷಗಾನ ರಂಗದಲ್ಲಿ ಪುಂಡುವೇಷದ ಗಂಡುಗಲಿ, ಧೀಂಗಿಣ ವೀರ ಎಂದೇ ಪ್ರಸಿದ್ಧಿ ಪಡೆದಿದ್ದರು.ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದ ಇವರು ಸಿಡಿಲಮರಿ ಎಂಬ ಬಿರುದು ಪಡೆದಿದ್ದರು.
ಇವರ ಕಲಾ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಜನರಾಗಿದ್ದರು. ಅಲ್ಲದೆ ಅಮೇರಿಕಾದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಒಂದೇ ಬಾರಿಗೆ 200 ರಿಂದ 250 ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿಯವರು 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದಿದ್ದರು.
ಅಜ್ಜನಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಆಕರ್ಷಿತರಾಗಿದ್ದ ಇವರು ಕುರಿಯ ವಿಠಲ ಶಾಸ್ತ್ರಿ ಅವರಿಂದ ಶಾಸ್ತ್ರಬದ್ಧವಾಗಿ ಯಕ್ಷಗಾನ ಅಭ್ಯಾಸ ಮಾಡಿದ್ದರು. ಸುಬ್ರಹ್ಮಣ್ಯ ಮೇಳ, ಬಾಳಂಬೆಟ್ಟು ಮೇಳ, ಪುತ್ತೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಶ್ರೀಧರ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವೇರ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿ ಕಲಾ ಸೇವೆಸಲ್ಲಿದ್ದರು.