ಮುಂಡ್ಕೂರು ದೇವಳ ಜಾತ್ರಾ ಮಹೋತ್ಸವದಲ್ಲಿ ಪಂಕ್ತಿ ಭೇಧ – ಭಕ್ತಾಧಿಗಳು ಆಕ್ರೋಶ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆದ ರಥೋತ್ಸವ ಜಾತ್ರಾಮಹೋತ್ಸವದಲ್ಲಿ ಭಕ್ತರಿಗಾಗಿ ಆಯೋಜಿಸಿದ್ದ ಅನ್ನ ಸಂತರ್ಪಣೆ ವ್ಯವಸ್ಥೆಯಲ್ಲಿ ಪಂಕ್ತಿ ಭೇಧ ಮಾಡಲಾಗಿದೆ ಎಂದು ಭಕ್ತಾಧಿಗಳು ಆಕ್ರೋಶಗೊಂಡ ಘಟನೆ ನಡೆದಿದೆ.

ಇಂದು (ಫೆ.18) ದೇವಸ್ಥಾನದಲ್ಲಿ ಸಂಭ್ರಮದ ರಥೋತ್ಸವ ಜಾತ್ರಾಮಹೋತ್ಸವ ನಡೆಯುತ್ತಿತ್ತು. ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮ ಹಿನ್ನೆಲೆ ಭಕ್ತರಿಗಾಗಿ ಮಹಾ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.  ಈ ವೇಳೆ ವಿವಿಧ ಸಮುದಾಯದವರಿಗೆ ಪ್ರತ್ಯೇಕ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಬ್ರಾಹ್ಮಣ ಸಮುದಾಯದವರಿಗೆ ದೇವಳದ ಅಂಗಣದಲ್ಲಿ ಹಾಗೂ ಗಣ್ಯ ವ್ಯಕ್ತಿಗಳಿಗೆ ಸಭಾಂಗಣದಲ್ಲಿ ಹಾಗೂ ವಿಶ್ವಕರ್ಮ ಸಮುದಾಯದವರಿಗೂ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಇತರರಿಗೆ ದೇವಸ್ಥಾನದ ಹಿಂಭಾಗದ ಗದ್ದೆಯಲ್ಲಿ ಛತ್ರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಇದರಿಂದ ಅನ್ನ ಸಂತರ್ಪಣೆಯಲ್ಲಿ ಪಂಕ್ತಿ ಭೇದ ಮಾಡಲಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಮುಂಡ್ಕೂರು ದೇವಳದಲ್ಲಿ ಕಳೆದ ಹಲವು ವರ್ಷಗಳಿಂದಲೂ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಪಂಕ್ತಿ ಭೇಧವನ್ನು ಮಾಡಲಾಗುತ್ತಿದೆ ಎಂದು ಭಕ್ತರು ಆರೋಪಿಸಿದ್ದಾರೆ.

 ಇದೀಗ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ದೇವಸ್ಥಾನದಲ್ಲಿ ಪ್ರಸಾದ ರೂಪವಾಗಿ ವಿತರಿಸುವ ಅನ್ನ ಸಂತರ್ಪಣೆಗೆ ಭಕ್ತರನ್ನು ಪ್ರತ್ಯೇಕವಾಗಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 

Leave a Reply

Your email address will not be published. Required fields are marked *

error: Content is protected !!