ಕ್ರಿಕೆಟ್ ಆಡುತ್ತಿರುವಾಗಲೇ ಆಟಗಾರ ಕುಸಿದು ಮೃತ್ಯು – ವಿಡಿಯೋ ವೈರಲ್
ಬೆಂಗಳೂರು: ಕ್ರಿಕೆಟ್ ಆಡುತ್ತಿರುವಾಗಲೇ ಆಟಗಾರನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಫೆ.17 ರಂದು ಪುಣೆಯ ಜುನ್ನಾರ್ ತೆಸಿಲ್ನಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಟೂರ್ನಮೆಂಟ್ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಾಬು ನಾಲ್ವಡೆ (47) ಮೃತ ಕ್ರಿಕೆಟಿಗ. ಕ್ರಿಕೆಟ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಬು ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕ್ರಿಕೆಟಿಗ ಬಾಬು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾಟದ ವೇಳೆ ಬಾಬು ಇದ್ದಕ್ಕಿದ್ದಂತೆ ಕುಸಿದು ಬೀಳುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿನ ವೈರಲ್ ಆಗುತ್ತಿದ್ದು, ಕ್ರಿಕೆಟ್ ಆಟಗಾರನ ನಿಧನಕ್ಕೆ ಅಪಾರ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.