ಬಿಆರ್ ಶೆಟ್ಟಿ ಅರ್ಜಿ ವಜಾ: ಸಾಲ ನೀಡುವ ಮಾನದಂಡ ಮರುಪರಿಶೀಲಿಸುವಂತೆ ಆರ್ ಬಿಐಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಸಾರ್ವಜನಿಕ ಹಣವನ್ನು ಸಾಲವಾಗಿ ನೀಡುವಾಗ ಮಾನದಂಡಗಳನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ.

ಮಂಗಳೂರು ಮೂಲದ ಖ್ಯಾತ ಎನ್ ಆರ್ ಐ ಉದ್ಯಮಿ ಬಿ ಆರ್ ಶೆಟ್ಟಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ನೇತೃತ್ವದ ನ್ಯಾಯಪೀಠ, ಈ ದೇಶದ ಪ್ರತಿ ಪ್ರಜೆಗೂ ಎಲ್ಲಿಗೆ ಬೇಕಾದರೂ ಪ್ರಯಾಣಿಸುವ ಹಕ್ಕಿದೆ. ಅದೇ ರೀತಿ ಸಾರ್ವಜನಿಕ ಹಣ ಪಡೆದ ನಂತರ ಅದನ್ನು ಮರುಪಾವತಿ ಮಾಡುವುದು ಕೂಡ ಪ್ರಜೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

ಅಬು ದಾಬಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಉದ್ಯಮಿ ಬಿ ಆರ್ ಶೆಟ್ಟಿಯವರಿಗೆ ಲುಕ್ ಔಟ್ ಸುತ್ತೋಲೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಬಿ ಆರ್ ಶೆಟ್ಟಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ವಜಾಗೊಳಿಸಿದೆ.

ಬ್ಯಾಂಕಿನಿಂದ ಸಾಲವಾಗಿ ಪಡೆದ 2,800 ಕೋಟಿ ರೂಪಾಯಿಗಳನ್ನು ಮರುಪಾವತಿಸಬೇಕೆಂದು ಬ್ಯಾಂಕುಗಳು ಬಿ ಆರ್ ಶೆಟ್ಟಿಯವರಿಗೆ ಹೇಳುತ್ತಿದೆ. ಬ್ಯಾಂಕಿನಿಂದ ಪಡೆದ ಹಣ ದೇಶದ ಠೇವಣಿದಾರರಿಗೆ ಸೇರಿದ್ದಾಗಿದೆ. ಅದನ್ನು ವಿದೇಶದಲ್ಲಿ ವ್ಯವಹಾರಗಳಿಗೆ ಬಳಸಿಕೊಂಡು ಬ್ಯಾಂಕಿಗೆ ಮರುಪಾವತಿಸಿಲ್ಲ ಎಂಬ ಆರೋಪ ಬಿ ಆರ್ ಶೆಟ್ಟಿ ಮೇಲಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ದುಬೈಯಿಂದ ಭಾರತಕ್ಕೆ ಬಂದಿದ್ದ ಬಿ ಆರ್ ಶೆಟ್ಟಿ ನಂತರ ಕಳೆದ ನವೆಂಬರ್ 14ರಂದು ಅಬುದಾಬಿಗೆ ಹೊರಟು ನಿಂತಿದ್ದರು. ಅದರೆ ಅವರಿಗೆ ಪ್ರಯಾಣಿಸಲು ವಲಸೆ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದರು

Leave a Reply

Your email address will not be published. Required fields are marked *

error: Content is protected !!