ಪಂಜಾಬ್ ಸ್ಥಳೀಯ ಚುನಾವಣೆ; ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, 4 ಜಯ, ಮೂರು ಕಡೆ ಮುನ್ನಡೆ
ಚಂಡೀಗಢ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊಸ ಇತಿಹಾಸ ಬರೆದಿದ್ದು, ಒಟ್ಟು 8 ಪುರಸಭೆಗಳ ಪೈಕಿ 4ರಲ್ಲಿ ಜಯಭೇರಿ ಸಾಧಿಸಿ, ಮೂರು ಕಡೆ
ಮುನ್ನಡೆ ಕಾಯ್ದುಕೊಂಡಿದೆ.
ಪಂಜಾಬ್ ಸ್ಥಳೀಯ ಚುನಾವಣಾ ಫಲಿಂತಾಶ ಪ್ರಕಟವಾಗುತ್ತಿದ್ದು, ಬೆಳಗ್ಗೆ 9 ಗಂಟೆಯಿಂದಲೇ ಮತಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 8 ಪುರಸಭೆಗಳ 2,302 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 109 ಮುನ್ಸಿಪಲ್ ಕೌನ್ಸಿಲ್ ಗಳಿಗೆ ಚುನಾವಣೆ ನಡೆದಿತ್ತು. ಇದರ ಫಲಿತಾಂಶ ಈಗ ಪ್ರಕಟವಾಗುತ್ತಿದೆ. ಈ 8 ಪುರಸಭೆಗಳ ಪೈಕಿ ಕಾಂಗ್ರೆಸ್ ಬತಿಂಡಾ, ಮೊಗಾ, ಹೋಶಿಯಾರ್‌ಪುರ ಮತ್ತು ಪಠಾಣ್‌ಕೋಟ್ ಪುರಸಭೆಗಳಲ್ಲಿ ಜಯಭೇರಿ ಬಾರಿಸಿದೆ. ಅಂತೆಯೇ ಬಟಲಾ, ಕಪುರ್ಥಾಲಾ ಮತ್ತು ಅಬೋಹರ್ ಪುರಸಭೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬತಿಂಡಾದಲ್ಲಿ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್
ಇನ್ನು ಬತಿಂಡಾದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಇತಿಹಾಸವೇ ಸೃಷ್ಟಿಯಾಗಿದೆ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬತಿಂಡಾದಲ್ಲಿ ಕಾಂಗ್ರೆಸ್ ಪಕ್ಷ ಮೇಯರ್ ಸ್ಥಾನ ಪಡೆದುಕೊಂಡಿದೆ. ಬತಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದು, ಕೃಷಿ ಕಾನೂನು ವಿಚಾರವಾಗಿ ಇತ್ತೀಚೆಗಷ್ಟೇ ಎಸ್‌ಎಡಿ ಎನ್ ಡಿಎ ಮೈತ್ರಿ ಕೂಟದಿಂದ ಹೊರಬಂದಿತ್ತು. ಇನ್ನು ಬತಿಂಡಾ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಹಣಕಾಸು ಸಚಿವ ಮನಪ್ರೀತ್ ಸಿಂಗ್ ಬಾದಲ್ ಪ್ರತಿನಿಧಿಸಿದ್ದರು.
ಇನ್ನು ಹಾಲಿ ಚುನಾವಣಾ ಫಲಿತಾಂಶಕ್ಕೆ ರೈತರ ಪ್ರತಿಭಟನೆ ಕಾರಣ ಎನ್ನಲಾಗುತ್ತಿದ್ದು, ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ಪರಿಣಾಮ ಇದು ಎನ್ನಲಾಗಿದೆ. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿಗೆ ಪಂಜಾಬ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.
ಫೆಬ್ರವರಿ 14ರಂದು 109 ನಗರಸಭೆ, ನಗರ ಪಂಚಾಯಿತಿ ಹಾಗೂ ಏಳು ಪುರಸಭೆಗಳಿಗೆ ಚುನಾವಣೆ ನಡೆದಿದ್ದು, ಶೇ.71.39 ಮತದಾನವಾಗಿತ್ತು. ಮೊಹಾಲಿ ಮುನ್ಸಿಪಲ್ ಕಾರ್ಪೋರೇಷನ್ ನ 2 ಬೂತ್‌ಗಳಲ್ಲಿ ಮಂಗಳವಾರ ಮರುಮತದಾನ ನಡೆದಿತ್ತು. 9,222 ಸ್ಪರ್ಧಿಗಳಲ್ಲಿ ಕಾಂಗ್ರೆಸ್ ನ 2,037 ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ 1003 ಸದಸ್ಯರೊಂದಿಗೆ ಕಣಕ್ಕೆ ಇಳಿದಿತ್ತು. ಅಂತೆಯೇ ಆಪ್ ನ 1,606 ಸ್ಪರ್ಧಿಗಳು ಮತ್ತು ಬಿಎಸ್ ಪಿ 160 ಸ್ಪರ್ಧಿಗಳು ಕಣದಲ್ಲಿದ್ದರು.