ದಾಖಲೆ ಮಟ್ಟಕ್ಕೇರಿದ ಪೆಟ್ರೋಲ್, ಡೀಸೆಲ್ ದರ – ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆ

ನವದೆಹಲಿ: ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100ರ ಗಡಿಯತ್ತ ಮುಖಮಾಡುತ್ತಿದ್ದರೆ ಮತ್ತೊಂದೆಡೆ ಎಲ್‍ಪಿಜಿ ಸಿಲಿಂಡರ್ ದರವೂ ಏರುತ್ತಿದೆ. ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದ್ದು, ಭಾನುವಾರ ಬೆಂಗಳೂರಿನಲ್ಲಿ 722 ರಷ್ಟಿದ್ದ ಎಲ್‍ಪಿಜಿ ಸಿಲಿಂಡರ್ ದರ ಈಗ  772 ರೂ.ಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್‍ನಿಂದ ಈಚೆಗೆ ಸಿಲಿಂಡರ್ ದರದಲ್ಲಿ ಮೂರು ಬಾರಿ ಹೆಚ್ಚಳ ಮಾಡಲಾಗಿದೆ.

ಎಲ್‍ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತಿರುತ್ತವೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಅಮೆರಿಕ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಹೆಚ್ಚಾಗುತ್ತದೆ ಮತ್ತು ಇಳಿಕೆಯಾಗುತ್ತದೆ. ಕೋವಿಡ್ 19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ.

ಭಾರತದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 26 ರಿಂದ 29 ಪೈಸೆಯಷ್ಟು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 26 ಪೈಸೆ ಏರಿಕೆಯಾಗಿ 88.99 ರೂ ಗೆ ಏರಿಕೆಯಾಗಿದೆ.  ಇದು ದಾಖಲೆ ಗರಿಷ್ಠ ಮಟ್ಟವಾಗಿದೆ. ಡೀಸೆಲ್ ದರ ಕೂಡ 79.35ರೂ ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 95.44 ಏರಿಕೆಯಾಗಿದ್ದು, ಡೀಸೆಲ್ ದರ 86.33ರೂ ಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪೆಟ್ರೋಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.95ರೂ ಹಾಗೂ ಡೀಸೆಲ್ ಬೆಲೆ 84.10 ರೂ ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ 91.17 ರೂಗೆ ಮತ್ತು ಡೀಸೆಲ್ 84.42 ರೂಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 90.24 ರೂಗೆ ಮತ್ತು ಡೀಸೆಲ್ 82.92 ರೂಗೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!