ಸಿಮೆಂಟ್,ಸ್ಟೀಲ್,ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ನಿಯಂತ್ರಿಸಿ: ಬಿಲ್ಡರ್ಸ್ ಅಸೋಸಿಯೇಷನ್ ಪ್ರತಿಭಟನೆ
ಬೆಂಗಳೂರು: ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯನ್ನು ನಿಯಂತ್ರಿಸುವಂತೆ ಬಿಲ್ಡರ್ಸ್ ಅಸೋಸಿಯೇಷನ್ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಒಂದು ದಿನ ಕಟ್ಟಡ ಕಾಮಗಾರಿಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ರಸ್ತೆಗೆ ಸುರಿಯುವ ಮೂಲಕ ಪ್ರತಿಭಟಿಸಿದ ಬಿಲ್ಡರ್ಸ್ ಅಸೋಸಿಯೇಷನ್ ನ ನೂರಾರು ಸದಸ್ಯರು, ಸಿಮೆಂಟ್ ಮತ್ತು ಸ್ಟೀಲ್ ದರಗಳನ್ನು ನಿಯಂತ್ರಣಕ್ಕೆ ತನ್ನಿ ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ, ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆಯ ಅಧ್ಯಕ್ಷ ಜಿ.ಎಂ ರವೀಂದ್ರ ಅವರು ಮಾತನಾಡಿ, ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳನ್ನು ನಿಯಂತ್ರಣಕ್ಕೆ ಸರಕಾರ ಮುಂದಾಗದೇ ಇದ್ದಲ್ಲಿ, ಕೃಷಿಯ ನಂತರ ಅತಿಹೆಚ್ಚು ಕೆಲಸಗಾರರನ್ನು ಹೊಂದಿರುವ ಕಟ್ಟಡ ನಿರ್ಮಾಣ ಕ್ಷೇತ್ರ ಅನಿವಾರ್ಯವಾಗಿ ನೈಫಥ್ಯಕ್ಕೆ ಸರಿಯಲಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆಯ ಅಧ್ಯಕ್ಷ ಜಿ. ಎಂ ರವೀಂದ್ರ ಅವರು ಮಾತನಾಡಿ, 60 ಮಿಲಿಯನ್ ಕಾರ್ಮಿಕರನ್ನು ಹೊಂದಿರುವ ಈ ಕ್ಷೇತ್ರ ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ನೀಡಿರುವ ಕ್ಷೇತ್ರವಾಗಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರ ದೇಶದ ಜಿಡಿಪಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ ಎಂದರು.
ಸಿಮೇಂಟ್ ಹಾಗೂ ಸ್ಟೀಲ್ ಕಟ್ಟಡ ಕಾಮಗಾರಿಗೆ ಬಳಸುವ ಅತ್ಯಂತ ಅವಶ್ಯಕ ಕಚ್ಚಾ ವಸ್ತುಗಳಾಗಿವೆ. ಈ ವಸ್ತುಗಳ ದರವನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಪ್ರಾಬಲ್ಯ ಪಡೆಯಲು ಯತ್ನಿಸುವುದು ಹಾಗೂ ಕೃತಕ ಅಭಾವ ಸೃಷ್ಟಿಸುವುದನ್ನ ತಪ್ಪಿಸಬೇಕಾಗಿದೆ. ಈ ರೀತಿಯ ಬೆಲೆ ಏರಿಕೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡಲಿದ್ದು, ಸರಕಾರಿ ಯೋಜನೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಮೂರು ವರ್ಷಗಳ ಕಂಪನಿಗಳ ಉತ್ಪಾದನಾ ಸಾಮಥ್ರ್ಯ ಹಾಗೂ ಉತ್ಪಾದನೆಯಾದ ಪ್ರಮಾಣ ನೋಡಿದಲ್ಲಿ ಸಿಮೆಂಟ್ ಕಂಫನಿಗಳ ವ್ಯತಿರಿಕ್ತ ಹಿತಾಸಕ್ತಿಯನ್ನು ಕಾಣಬಹುದಾಗಿದೆ. ಬೇಕಂತಲೇ ತಮ್ಮ ಸಾಮಥ್ರ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಕೃತಕ ಅಭಾವನ್ನು ಸೃಷ್ಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 2020 ಜನವರಿಯ ವೇಳೆಯಲ್ಲಿ ಸಿಮೆಂಟ್ ದರ 250 ರೂಪಾಯಿಗಳಿಷ್ಟಿತ್ತು. ಬಳಿಕ ನವೆಂಬರ್ 2020 ರ ಒಳಗಾಗಿ ಈ ಬೆಲೆಯಲ್ಲಿ ಭಾರಿ ಪ್ರಮಾಣದ ಬದಲಾವಣೆ ಕಂಡುಬಂದಿತ್ತು. ಆದರೆ, ಫೆಬ್ರವರಿ 2021 ರ ವೇಳೆಗೆ ಪ್ರತಿ ಚೀಲ ಸಿಮೇಂಟ್ ಬೆಲ 360 ರೂಪಾಯಿಗಳಿಂದ 450 ರೂಪಾಯಿಗಳಷ್ಟು ಏರಿಕೆ ಕಂಡಿದ್ದನ್ನು ಕಾಣಬಹುದಾಗಿದೆ ಎಂದರು.
ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಮಾತನಾಡಿ, ಇನ್ಸೂರೆನ್ಸ್ ಹಾಗೂ ಟೆಲಿಕಾಂ ರೆಗ್ಯೂಲೇಟರಿ ಪ್ರಾಧಿಕಾರಗಳ ರೀತಿಯಲ್ಲಿಯೇ ಸಿಮೆಂಟ್ ಹಾಗೂ ಸ್ಟೀಲ್ ರೇಟ್ ಗಳನ್ನು ನಿಯಂತ್ರಿಸುವ ಪ್ರಾಧಿಕಾರ ರಚನೆ ಆಗಬೇಕು. ಈ ರೀತಿ ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸ್ಟೀಲ್ ರೆಗ್ಯೂಲೇಟರಿ ಅಥಾರಿಟಿಯನ್ನು ರಚಿಸಬೇಕು. ಈ ಮೂಲಕ ಕಚ್ಚಾವಸ್ತುಗಳು ಹಾಗೂ ತೆರಿಗೆಯನ್ನು ಹೆಚ್ಚಿಗೆ ಮಾಡದೇ ಬೆಲೆಗಳನ್ನು ನಿಯಂತ್ರಿಸಬೇಕು ಆಗ್ರಹಿಸಿದರು.
ಈ ಸಂದರ್ಭ ಬಿಐಎ ಆಲ್ ಇಂಡಿಯಾ ಮಾಜಿ ಅಧ್ಯಕ್ಷ ವಿಜಯ ರಾಘವ ರೆಡ್ಡಿ, ಬಿಐಎ ಮಾಜಿ ರಾಜ್ಯಾಧ್ಯಕ್ಷ ಸೋಮೇಶ್ ರೆಡ್ಡಿ, ಮಾಜಿ ಉಪಾಧ್ಯಕ್ಷ. ಸುಬ್ರಮಣಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ನೂರಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಕ್ಷೇತ್ರದ ಸದಸ್ಯರು ಹಾಗೂ ಕಟ್ಟಡ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.