ತಾಕತ್ತಿದ್ದರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿ, ಐದು ಸ್ಥಾನ ಗೆದ್ದು ತೋರಿಸಲಿ: ಎಚ್ ಡಿಕೆ ಸವಾಲು

ಬೆಂಗಳೂರು: ತಾಕತ್ತಿದ್ದರೆ ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ. ನನ್ನ ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ‌. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ ಗಲ್ಲ, ತಮಗೆ 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ? ಎಂದು ಸವಾಲು ಹಾಕಿದ್ದಾರೆ.

ಜೆಡಿಎಸ್ ಕಣದಿಂದ ಹಿಂದೆ ಸರಿಯುವುದನ್ನು ಗೇಲಿ ಮಾಡುವ ಮುನ್ನಸಿದ್ದರಾಮಯ್ಯರಿಗೆ ಗುಂಡ್ಲುಪೇಟೆ, ನಂಜನಗೂಡು ನೆನಪಾಗಬೇಕಿತ್ತು? ಅಂದು ದೇವೇಗೌಡರು ಜಾತ್ಯತೀತ ನಿಲುವಿಗೆ ಕಟ್ಟುಬಿದ್ದು ಕಾಂಗ್ರೆಸ್ ಬೆಂಬಲಿಸಿದ್ದರು. ಆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಸಾಕಷ್ಟು ಬಲವಿತ್ತು. ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಜೆಡಿಎಸ್ ನವರಾಗಿದ್ದರು. ಉಪಚುನಾವಣೆಗಳು ಅಧಿಕಾರಸ್ಥರ, ದುಡ್ಡಿರುವವರ ಚುನಾವಣೆಗಳು. ಈ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ಪ್ರತಿಷ್ಠೆಯ ಈ ಹೋರಾಟದಲ್ಲಿ ಸ್ಪರ್ಧಿಸದೇ ಇರುವ ಪಕ್ಷವೊಂದರ ನಿಲುವನ್ನು ಟೀಕಿಸುವ ಮುನ್ನ ಯಾರೇ ಆದರೂ ಯೋಚಿಸಬೇಕು. ಇಲ್ಲವಾದರೆ ಟೀಕೆಯೇ ಅವರಿಗೆ ಮುಳುವಾಗುತ್ತದೆ‌. ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮರ್ಥ್ಯ ತೋರಿಸುವ ಕೆಲಸ ಮಾಡೋಣವಂತೆ‌. ಅಲ್ಲಿಯವರೆಗೆ ಅವರು ತಾಳಲಿ. ಜೆಡಿಎಸ್ನಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಜೆಡಿಎಸ್ ಗೆ ಶಕ್ತಿ ಎಲ್ಲಿದೆ ಎಂಬ ಅವರ ಹೇಳಿಕೆಗಳು, ಜೆಡಿಎಸ್ ಗೆ ಅವರು ಬಗೆದ ದ್ರೋಹದ ಪ್ರತೀಕ. ನಮ್ಮ ಬಗ್ಗೆ ಮಾತಾಡುವ ಅಧಿಕಾರ ಅವರಿಗಿಲ್ಲ ಎಂದು ಅವರು ಟ್ವಿಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!