ಪೊಲೀಸ್ ಅಧಿಕಾರಿಗಳ ವರ್ಗಾವಣೆ 2 ವರ್ಷಗಳಿಗೆ – ಸರ್ಕಾರ ಗಂಭೀರ ಚಿಂತನೆ ಬೊಮ್ಮಾಯಿ
ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆ ಈ ಹಿಂದಿನಂತೆ ಪ್ರತಿ ಎರಡು ವರ್ಷಗಳಿಗೆ ನಿಗದಿ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಪೊಲೀಸ್ ಬೋರ್ಡ್ ರಚಿಸಲಾಗಿದೆ. ಪೊಲೀಸ್ ಬೋರ್ಡ್ ಪ್ರತಿ ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಬಹುದು ಎಂದು ನಿಗದಿ ಮಾಡಿತ್ತು. ಆದರೆ, ಹಿಂದಿನ ಸರ್ಕಾರ ಅದನ್ನು ಒಂದು ವರ್ಷಕ್ಕೆ ಇಳಿಸಿತ್ತು. ಅದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪುನಃ ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಆನ್‌ಲೈನ್ ಗೇಮಿಂಗ್ ಮತ್ತು ಸ್ಕಿಲ್ ಗೇಮಿಂಗ್ ಮೇಲೆ ನಿಯಂತ್ರಣ ವಿಧಿಸಲು ಕಾನೂನು ರೂಪಿಸಲು ಉದ್ದೇಶಿಸಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯೊಂದನ್ನು ಮಂಡಿಸಲಾಗುವುದು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ರಾಷ್ಟ್ರದಲ್ಲೇ ಕರ್ನಾಟಕ ಅತ್ಯಂತ ಶಾಂತಿಯುತ ರಾಜ್ಯ. ಕಳೆದ ಒಂದು ವರ್ಷದಲ್ಲಿ ರಾಷ್ಟ್ರದ ಹಲವು ಕಡೆ ಸಮಸ್ಯೆಗಳಿದ್ದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೇಶದ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಾನ ಪಡೆದಿದೆ. ಅಲ್ಲದೆ, ಅಪರಾಧಗಳ ಅಂಕಿ–ಅಂಶಗಳೂ ಸಹ ರಾಜ್ಯದಲ್ಲಿ ಉತ್ತಮ ವಾತಾವರಣ ಇರುವುದನ್ನು ಸಾರುತ್ತವೆ. ಪೊಲೀಸ್ ಇಲಾಖೆಯ ಕಠಿಣ ಪರಿಶ್ರಮದಿಂದ ರಾಜ್ಯದಲ್ಲಿ ಘೋರ ಅಪರಾಧಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸೈಬರ್ ಅಪರಾಧಗಳು ಭವಿಷ್ಯದಲ್ಲಿ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತವೆ. ಈ ಸವಾಲನ್ನು ಎದುರಿಸಲು ಬೆಂಗಳೂರು ನಗರದಲ್ಲಿ ಹೊಸದಾಗಿ 8 ಸಿ.ಇ.ಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕ್ರಮ ವಹಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು..
ಅತ್ಯಂತ ಹೆಚ್ಚು ಜನಸಂದಣಿ ಇರುವ ಬೆಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆಯನ್ನು ತಡೆಯಲು ಹೊಸದಾಗಿ ಉಗ್ರಗಾಮಿ ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ ಎಂದರು.
ಪೊಲೀಸ್ ಗೃಹ–2020 ಯೋಜನೆಗೆ ₹2,272.37 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿಗಳು ನಡೆದಿವೆ. ಈವರೆಗೂ 10,134 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಕಾಮಗಾರಿಗಳು ಈ ವರ್ಷವೇ ಪೂರ್ಣಗೊಳ್ಳಲಿವೆ ಎಂದು ಮುಖ್ಯಮಂತ್ರಿ ಹೇಳಿದರು.