ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯಾ ಆರೋಪಿ, ರೌಡಿ ಶೀಟರ್ ಪಿಂಕಿ ನವಾಜ್ ಮೇಲೆ ಮಾರಣಾಂತಿಕ ದಾಳಿ
ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಘಟನೆ ನಡೆದಿದ್ದು, ಕೊಲೆಯ ಪ್ರಮುಖ ಆರೋಪಿ, ರೌಡಿ ಶೀಟರ್ ಪಿಂಕಿ ನವಾಜ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಿಂದ ನವಾಜ್ ಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದ ಆರು ಜನರ ತಂಡ ಪಿಂಕಿ ನವಾಜ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮಹಿಳೆ ವಿಚಾರವಾಗಿ ಈ ಹತ್ಯಾ ಯತ್ನ ನಡೆದಿದೆನ್ನಲಾಗಿದೆ.
2018ರ ಜ.3ರಂದು ಮನೆಗೆ ತೆರಳುತ್ತಿದ್ದ ದೀಪಕ್ ರಾವ್ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು.