ಹೆಜಮಾಡಿ ಟೋಲ್: ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿಗೆ ಆಗ್ರಹ

ಪಡುಬಿದ್ರಿ: ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ ಹಾಗೂ  ಹಿಂದೆ ಗ್ರಾಮಸ್ಥರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಂತೆ ಎಂದು ಒತ್ತಾಯಿಸಿ ಬುಧವಾರ ಸ್ಥಳೀಯರು ಟೋಲ್‌ಗೇಟ್‌ನಲ್ಲಿ ಮನವಿ ಸಲ್ಲಿಸಿದರು.

ದೇಶದ ಎಲ್ಲ ಟೋಲ್‌ಗಳಲ್ಲಿ ಇದೇ 15 ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳ್ಳಲಿದ್ದು, ಇದರಿಂದ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯು ರದ್ದುಗೊಳ್ಳಲಿದೆ. ಬುಧವಾರ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ  ಜ್ಯೂನಿಯರ್ ಕಾಲೇಜು ಬಳಿ ಸದಸ್ಯರು ಜಮಾಯಿಸಿದರು. ಆ ಬಳಿಕ ಹೆಜಮಾಡಿ ಟೋಲ್‌ಗೇಟ್‌ಗೆ ತೆರಳಿ ಮನವಿ ಸಲ್ಲಿಸಿದರು. 15 ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸ್ಥಳೀಯರಿಗೆ ಟೋಲ್ ವಿನಾಯಿತಿ, ಉದ್ಯೋಗವಕಾಶ, ಕನ್ನಂಗಾರು ಬಳಿ ಸರ್ವಿಸ್ ರಸ್ತೆ, ಶಿವನಗರ ಬಳಿ ಸ್ಕೈವಾಕ್, ದಾರಿದೀಪ ಮತ್ತು ಚರಂಡಿ ವ್ಯವಸ್ಥೆ, ಬಸ್‌ ತಂಗುದಾಣ ನಿರ್ಮಾಣ  ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಪಡುಬಿದ್ರಿ ಕಡೆಯಿಂದ ಹೆಜಮಾಡಿಗೆ ಬರುವ ವಾಹನಗಳು ಬೀಡು ಬಳಿ ವಿರುದ್ಧ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಕೂಡಲೇ ಬೀಡುವಿನಿಂದ ಕನ್ನಂಗಾರುವರೆಗೆ ಸರ್ವಿಸ್ ರಸೆ ನಿರ್ಮಾಣಗೊಳಿಸಲೇಬೇಕು ಎಂದು ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ ಹೆಜ್ಮಾಡಿ ಆಗ್ರಹಿಸಿದ್ದು, ಈ ಭಾಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ವಾಹನದ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಮನವರಿಕೆ ಮಾಡಿದರು.

ಕನ್ನಂಗಾರು ಬೈಪಾಸ್ ಸರ್ವಿಸ್ ರಸ್ತೆ ನಿರ್ಮಿಸುವ ಬೇಡಿಕೆಯ ಬಗ್ಗೆ ಗಮನ ಹರಿಸಲಾಗಿದ್ದು, ಶೀಘ್ರ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸೂಚಿಸಲಾಗುವುದು. ಅಲ್ಲದೆ ಗ್ರಾಮಸ್ಥರ ವಿವಿಧ ಬೇಡಿಕೆಗಳ ಬಗ್ಗೆ ಕಂಪನಿ ಮುಖ್ಯಸ್ಥರ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು. ಕ್ರಿಯಾ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಂ, ಸದಸ್ಯರಾದ ಶೇಖಬ್ಬ ಕೋಟೆ, ರೋಲ್ಫಿ ಡಿಕೋಸ್ತಾ, ಪ್ರಾಣೇಶ್ ಹೆಜ್ಮಾಡಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮುಖಂಡರುಗಳಾದ ಸುಭಾಷ್ ಸಾಲ್ಯಾನ್, ಸುಧೀರ್ ಕರ್ಕೇರ, ವಾಮನ ಕೋಟ್ಯಾನ್ ನಡಿಕುದ್ರು, ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಂಗ ಕರ್ಕೇರ, ರೇಷ್ಮಾ, ಶಿವ ಪೂಜಾರಿ, ನೀಲೇಶ್ ಮತ್ತು ಮೋಹನ್, ಸಚಿನ್ ನಾಯಕ್, ಹಂಝ ಕನ್ನಂಗಾರ್, ಅಬ್ದುಲ್ ರೆಹಮಾನ್, ಹನೀಫ್, ಇಕ್ಬಾಲ್, ಅಬ್ಬಾಸ್ ಹಾಜಿ, ಕೋಟೆ ಇಬ್ರಾಹಿಂ, ಸಯೀದ್ ಕನ್ನಂಗಾರ್  ಇದ್ದರು.

ಸ್ಥಳೀಯರಿಗೆ ವಿನಾಯಿತಿ:
ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಮನವಿ ಸ್ವೀಕರಿಸಿ ಮಾತನಾಡಿ, ‘ಇದೇ 15 ರಿಂದ ದೇಶದಾದ್ಯಂತ ಫಾಸ್ಟ್ಯಾಗ್‌ ಕಡ್ಡಾಯಗೊಳ್ಳಲಿದೆ. ರಿಯಾಯಿತಿ ಅಸಾಧ್ಯ. ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡಲು ಕಂಪನಿ ನಿರ್ಧರಿಸಿದೆ. ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದ್ದು, ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿರುವುದರಿಂದ ಫಾಸ್ಟ್ಯಾಗ್ ಮೂಲಕವೇ ಹೆಜಮಾಡಿಯ ವಾಹನಗಳಿಗೆ ಸಂಪೂರ್ಣ ವಿನಾಯಿತಿಗೆ ಕ್ರಮಕೈಗೊಳ್ಳಲಾಗುವುದು’ ಎಂದರು. 

Leave a Reply

Your email address will not be published. Required fields are marked *

error: Content is protected !!