ನಿಷೇಧದ ನಂತರವೂ ಭಾರತದಲ್ಲಿ ಚೀನಾ ಮೂಲದ 80 ಕಂಪನಿಗಳು ಸಕ್ರಿಯ: ಕೇಂದ್ರ ಸಚಿವ ಅನುರಾಗ್
ನವದೆಹಲಿ: ಗಲ್ವಾನ್ ಕಣಿವೆಯ ಎಲ್ಎಸಿಯಲ್ಲಿ ಚೀನಾ ಪುಂಡಾಟಿಕೆಯ ನಂತರ ಭಾರತ ಚೀನಾದ ಒಂದಷ್ಟು ಕಂಪನಿಗಳನ್ನು ಭಾರತದಲ್ಲಿ ನಿಷೇಧಿಸಿತ್ತು.
ಈ ಬಗ್ಗೆ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು, 2020 ರಲ್ಲಿ ಭಾರತ ಸರ್ಕಾರ ಒಂದಷ್ಟು ಚೀನಾ ಕಂಪನಿಗಳನ್ನು ನಿಷೇಧಿಸಿದ ನಂತರವೂ ಭಾರತದಲ್ಲಿ ಈಗ ಎಷ್ಟು ಚೀನಾ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಎಂಬ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಪರವಾಗಿ ಮಾಹಿತಿ ನೀಡಿರುವ ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, “ಪ್ರಸ್ತುತ ಚೀನಾ ಮೂಲದ 80 ಕಂಪನಿಗಳು ಭಾರತದಲ್ಲಿ ಸಕ್ರಿಯ ಉದ್ಯಮಗಳನ್ನು ನಡೆಸುತ್ತಿದೆ” ಎಂದು ಹೇಳಿದ್ದಾರೆ. ಭಾರತದಲ್ಲಿ ಈ ವರೆಗೂ ಚೀನಾ ಮೂಲದ 92 ಕಂಪನಿಗಳು ನೋಂದಣಿ ಮಾಡಿಕೊಂಡಿವೆ.
ಚೀನಾ ಕಂಪನಿಗಳು ಭಾರತ ಸರ್ಕಾರದ ನಿಯಮಗಳಿಗೆ ಬದ್ಧವಾಗಿರಲು ಅಗತ್ಯವಿರುವ ಕಾನೂನುಗಳು ಜಾರಿಯಲ್ಲಿವೆ. ಇದನ್ನು ಎಲ್ಲಾ ಕಂಪನಿಗಳೂ ಪಾಲಿಸಬೇಕು ಎಂದು ರಾಜ್ಯಸಭೆಗೆ ಹೇಳಿದ್ದಾರೆ. ಗಲ್ವಾನ್ ಸಂಘರ್ಷದ ನಂತರ ಮೋದಿ ನೇತೃತ್ವದ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಕನಿಷ್ಟ 59 ಮೊಬೈಲ್ ಆಪ್ ಗಳನ್ನು ನಿಷೇಧಿಸಿತ್ತು.