ಉಡುಪಿ: ನರ್ಮ್ ಬಸ್ ಪ್ರಾರಂಭಿಸಲು ಕಾಂಗ್ರೆಸ್ ಒತ್ತಾಯ

ಉಡುಪಿ: ನಗರ ಹಾಗೂ ಜಿಲ್ಲೆಯಲ್ಲಿ ಪ್ರಮೋದ್ ಮಧ್ವರಾಜ್‌ರವರು ಸಚಿವರಾಗಿದ್ದಾಗ 51 ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಸತತ ಪರಿಶ್ರಮದಿಂದ ಖಾಸಗಿ ಬಸ್ ಮಾಲಿಕರ ಲಾಬಿಗೆ ಮಣಿಯದೆ ಪ್ರಾರಂಭಿಸಿದರು. ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ನಿತ್ಯ ಪ್ರಯಾಣಿಕರಿಗೆ ಮಿತದರದಲ್ಲಿ ಪ್ರಯಾಣಿಸಲು ಅನುಕೂಲವಾಗಲು ಅವಶ್ಯಕತೆ ಇದ್ದ ಮಾರ್ಗಗಳಲ್ಲಿ ಸರಕಾರಿ ಬಸ್‌ಗಳನ್ನು ಪ್ರಾರಂಭಿಸಿದರು. 

ಕಳೆದ ವರ್ಷ ಕೋವಿಡ್ -19 ನೆಪದಿಂದ ತನ್ನ ಸಂಚಾರವನ್ನು ಕೆಲವು ತಿಂಗಳು ಸಂಪೂರ್ಣ ನಿಲ್ಲಿಸಿದ ಸರಕಾರಿ ನರ್ಮ್ ಬಸ್‌ಗಳು ಲಾಕ್‌ಡೌನ್ ಮುಕ್ತಗೊಂಡ ನಂತರ ಪುನಃ ರಸ್ತೆಗಿಳಿಯ ಬೇಕಾದ ಬಸ್‌ಗಳು ಪ್ರಯಾಣಿಕರ ಕೊರತೆ ನೆಪದಲ್ಲಿ ಪ್ರಾರಂಭವಾಗಲೇ ಇಲ್ಲ. ಇತ್ತೀಚಿಗೆ ಬೆರಳೆಣಿಕೆಯ ನರ್ಮ್ ಬಸ್‌ಗಳು ಪ್ರಾರಂಭವಾಗಿದೆ. ಈಗಾಗಲೇ ಎಲ್ಲಾ ಸರಕಾರಿ ಯಾ ಖಾಸಗಿ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಅವಶ್ಯಕತೆ ಇರುವಲ್ಲಿ ನರ್ಮ್ ಬಸ್‌ಗಳನ್ನು ಪುನಃ ಆರಂಭಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತದೆ.

ಖಾಸಗಿ ಬಸ್ ಮಾಲಕರ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್‌ ಬಿಜೆಪಿ ಜಿಲ್ಲಾ ಅಧ್ಯಕ್ಷರಾದುದರಿಂದ ಖಾಸಗಿ ಬಸ್ ಲಾಬಿಗೆ ಮಣಿದು ಉಡುಪಿ ಶಾಸಕರು ನರ್ಮ್ ಬಸ್‌ಗಳನ್ನು ಪ್ರಾರಂಭಿಸದoತೆ ತಡೆ ಹಾಕಿದ್ದಾರೆ ಎಂಬ ಸಂಶಯ ನಾಗರಿಕರಲ್ಲಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ನಗರ ನರ್ಮ್ ಬಸ್ ನಿಲ್ದಾಣದ ಕಾಮಗಾರಿ ಪೂರ್ತಿಗೊಂಡು ಎರಡು ವರ್ಷದ ನಂತರ ಇತ್ತೀಚಿಗೆ ಅನಿವಾರ್ಯವಾಗಿ ಉದ್ಘಾಟನೆಗೊಂಡದ್ದನ್ನು ಉಲ್ಲೇಖಿಸುತ್ತಿದ್ದೇವೆ.

ನರ್ಮ್ ಬಸ್‌ಗಳನ್ನು ಜಿಲ್ಲೆಯಾದ್ಯಂತ 51 ಮಾರ್ಗಗಳಲ್ಲಿ ಪ್ರಾರಂಭಿಸುವಂತೆ ಹಾಗೂ ಈ ಹಿಂದಿನಂತೆ ವಿದ್ಯಾರ್ಥಿಗಳಿಗೆ, ನಿತ್ಯ ಪ್ರಯಾಣಿಕರಿಗೆ, ಹಿರಿಯ ನಾಗರಿಕರಿಗೆ ರಿಯಾಯಿತಿ ಪ್ರಯಾಣ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕಾಗಿ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದ್ದಾರೆ.

ಇಲ್ಲದಿದ್ದಲ್ಲಿ ನಾಗರಿಕರ ಸಹಕಾರದೊಂದಿಗೆ ಹೋರಾಟ ಮಾಡುವುದಾಗಿ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್, ಮಾಜಿ ಜಿ.ಪಂ. ಸದಸ್ಯರಾದ ದಿವಾಕರ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ನಗರಸಭಾ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!