ಉಡುಪಿ: ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿ – ನಮಿತಾ ಶೈಲೇಂದ್ರ ರಾವ್
ಉಡುಪಿ: ಕ್ಯಾನ್ಸರ್ನಿಂದ ತಲೆಕೂದಲು ಕಳೆದುಕೊಂಡಿರುವವರ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶ ದಿಂದ ಫೆ.21ರಂದು ಕಾರ್ಕಳದ ರೋಟರಿ ಬಾಲಭವನದಲ್ಲಿ ‘ಕೇಶದಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಕಳ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ನಮಿತಾ ಶೈಲೇಂದ್ರ ರಾವ್ ತಿಳಿಸಿದರು. ಸೋಮವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ರೋಟರಿ ಆನ್ಸ್ ಕ್ಲಬ್, ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಹಾಗೂ ಯುವವಾಹಿನಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 9 ರಿಂದ 12ರವರೆಗೆ ಕಾರ್ಯಕ್ರಮ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂದರು. ಒಬ್ಬರು ಕ್ಯಾನ್ಸರ್ ರೋಗಿಗೆ ವಿಗ್ ತಯಾರಿಸಲು ಮೂವರ ಕೂದಲು ಅಗತ್ಯ. ಕೂದಲು ತೆಳುವಾಗಿದ್ದರೆ 10 ಜನರ ಕೂದಲು ಬೇಕಾಗಬಹುದು. ಕಾರ್ಕಳದಲ್ಲಿ ಈಗಾಗಲೇ ಮೂವರು ಕೂದಲು ಕಳುಹಿಸಿದ್ದಾರೆ. ಅಭಿಯಾನ ಆರಂಭವಾದ ಮೂರು ದಿನಗಳಲ್ಲಿ 15 ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳ ಮುಖದಲ್ಲಿ ನಗುವಿಗೆ ಕಾರಣರಾಗಬೇಕು ಎಂದು ವಿನಂತಿಸಿದರು. ಸಂಸ್ಥೆಯ ಮರಿಯಾ ಮೋಲಿ, ವೇದಾ ಸುವರ್ಣ, ತಾರಾನಾಥ್ ಕೋಟ್ಯಾನ್ ಇದ್ದರು. ಹೆಸರು ನೋಂದಾಯಿಸಿ: ಕೇಶದಾನ ಮಾಡಲು ಆಸಕ್ತಿ ಇರುವವರು ಹೆಸರು ನೋಂದಾಯಿಸಿ ಕೊಳ್ಳಬೇಕು. ಕಾರ್ಯಕ್ರಮಕ್ಕೆ ಬಂದು ಕೂದಲು ಕೊಡಲು ಇಷ್ಟವಿಲ್ಲದವರು ಮನೆಯಿಂದಲೇ ಕೊರಿಯರ್ ಮೂಲಕ, ನಮಿತಾ ಶೈಲೇಂದ್ರ ರಾವ್, ರೋಟರಿ ಆನ್ಸ್ ಕ್ಲಬ್, ಕಾರ್ಕಳ ಈ ವಿಳಾಸಕ್ಕೆ ಕಳುಹಿಸಬಹುದು. ಕೂದಲು ಕನಿಷ್ಠ 15 ಇಂಚು ಇರಲಿ ಎಂದು ಮನವಿ ಮಾಡಿದರು. |