ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ನಾವು ರಕ್ಷಿಸಿಕೊಳ್ಳಬೇಕಿದೆ: ಎಂಎಸ್ಪಿ ಇರುತ್ತದೆ: ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನಿನ ಕುರಿತಂತೆ ಭುಗಿಲೆದ್ದಿರುವ ಪ್ರತಿಭಟನೆ ಕುರಿತು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ನಾವು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೃಷಿ ಸುಧಾರಣೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಪ್ರಧಾನಿ ಮೋದಿ, ಈ ಹಿಂದೆ ಯಾವ ಕಾಂಗ್ರೆಸ್ ಪಕ್ಷ ಕೃಷಿ ಸುಧಾರಣೆ ಜಾರಿಗೆ ತರಲು ಮುಂದಾಗಿತ್ತೋ.. ಅದೇ ಪಕ್ಷ ಇಂದು ತನ್ನದೇ ನಿಲುವಿನಿಂದ ಯೂಟರ್ನ್ ಹೊಡೆದಿದೆ. ದೇಶದಲ್ಲಿ ಹೊಸ ತಳಿಯ ಪ್ರತಿಭಟನಾಕಾರರು ಮತ್ತು ಚಳುವಳಿಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಎಚ್ಚರದಿಂದಿರಬೇಕು. ದೇಶದಲ್ಲಿ ಹೊಸ ಎಫ್ಡಿಐ (ವಿದೇಶಿ ವಿನಾಶಕಾರಿ ಐಡಿಯಾಲಜಿ) ಹೊರಹೊಮ್ಮಿದೆ ಮತ್ತು ಅಂತಹ ಸಿದ್ಧಾಂತದಿಂದ ದೇಶವನ್ನು ಉಳಿಸಲು ನಾವು ಹೆಚ್ಚು ಜಾಗೃತರಾಗಿರಬೇಕು ಎಂದು ಹೇಳಿದರು.
ರೈತನನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2014 ರಿಂದ ತಮ್ಮ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಪ್ರಾರಂಭಿಸಿದೆ. ಬೆಳೆ ವಿಮೆ ಯೋಜನೆಯನ್ನು ಹೆಚ್ಚು ರೈತ ಸ್ನೇಹಿಯನ್ನಾಗಿ ಮಾಡಲು ಬದಲಾಯಿಸಲಾಯಿತು. ಪಿಎಂ ಕಿಸಾನ್ ಸಮ್ಮನ್ ನಿಧಿ ಅವರ ಅಡಿಯಲ್ಲಿ ರೈತರ ಖಾತೆಗೆ 1.15 ಲಕ್ಷ ಕೋಟಿ ರೂ. ಪಾವತಿಸಲಾಗಿದೆ. ಬೆಳೆ ವಿಮೆಯಡಿ ತೆರವುಗೊಳಿಸಿದ 90,000 ಕೋಟಿ ರೂ. ಸಾಲಗಳು, 1 ಹೆಕ್ಟೇರ್ಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರ ಸಂಖ್ಯೆ ಶೇಕಡ 51 ರಿಂದ 68 ಕ್ಕೆ ಏರಿದೆ ಎಂದು ಹೇಳಿದರು.
‘ಸಿಖ್ಖರ ಕೊಡುಗೆಯ ಬಗ್ಗೆ ಭಾರತವು ತುಂಬಾ ಹೆಮ್ಮೆಪಡುತ್ತದೆ. ಅವರ ಬಗ್ಗೆ ಕೆಲವರು ಬಳಸುವ ಭಾಷೆ ದೇಶಕ್ಕೆ ಪ್ರಯೋಜನವಾಗುವುದಿಲ್ಲ. ಕೆಲವರು ಸಿಖ್ಖರನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಸಿಖ್ ಸಮುದಾಯ ರಾಷ್ಟ್ರಕ್ಕಾಗಿ ತುಂಬಾ ತ್ಯಾಗ ಮತ್ತು ಬಲಿದಾನ ಮಾಡಿದ ಸಮುದಾಯವಾಗಿದೆ. ಸಿಖ್ಖರ ಕೊಡುಗೆಯ ಬಗ್ಗೆ ದೇಶವು ಹೆಮ್ಮೆಪಡುತ್ತದೆ. ಆದರೆ ಕೆಲವರು ಅವರನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಗುರು ಸಾಹಿಬ್ಗಳ ಮಾತುಗಳು ಮತ್ತು ಆಶೀರ್ವಾದಗಳು ಅಮೂಲ್ಯವಾದವು ಎಂದು ಹೇಳಿದರು.
ಹಿಂದೆಯೂ ಬೆಂಬಲ ಬೆಲೆ ಇತ್ತು, ಮುಂದೆಯೂ ಇರುತ್ತದೆ: ಹೋರಾಟ ಹಿಂಪಡೆಯಿರಿ
ಇದೇ ವೇಳೆ ಬೆಂಬಲ ಬೆಲೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಹಿಂದೆಯೂ ಬೆಂಬಲ ಬೆಲೆ ಇತ್ತು, ಮುಂದೆಯೂ ಇರುತ್ತದೆ.. ಈ ಬಗ್ಗೆ ಸರ್ಕಾರದ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಹೇಳಿದರು. ‘ಹಾಲು ಉತ್ಪಾದನೆ ಯಾವುದೇ ಬಂಧನಕ್ಕೆ ಒಳಗಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ಡೇರಿಗಳ ಪಾತ್ರ ಶೇ. 28ರಷ್ಟಿದೆ. ಹೊಸ ವಿಚಾರಗಳು ಬಂದಾಗ ಗೊಂದಲಗಳಾಗುವುದು ಸಹಜ. ರೈತರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಹೋರಾಟ ಮಾಡುತ್ತಿರುವ ರೈತರ ಜೊತೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ಗೊಂದಲ ಬೇಡ. ಈ ಹಿಂದೆಯೂ ಎಂಎಸ್ ಪಿ ಇತ್ತು, ಈಗಲೂ ಎಂಎಸ್ ಪಿ ಇದೆ ಮತ್ತು ಮುಂದೆಯೂ ಎಂಎಸ್ ಪಿ ಇರಲಿದೆ ಎಂದು ಹೇಳಿದರು.
ಅಂತೆಯೇ, ‘ದೇಶದ ರೈತರ ಕಷ್ಟಗಳನ್ನು ದೂರ ಮಾಡಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವತ್ತ ಗಮನಹರಿಸಬೇಕಿದೆ. ಕಾಯ್ದೆಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುತ್ತೇವೆ. ರೈತರು ಬಂದು ತಮ್ಮ ಸಮಸ್ಯೆ ಬಗ್ಗೆ ಮಾತುಕತೆ ನಡೆಸಲಿ. ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಿರಿ. ಪ್ರತಿಭಟನಾನಿರತ ವೃದ್ಧ ರೈತರು ಮನೆಗೆ ತೆರಳಬೇಕು. ರೈತರು ತಮ್ಮ ಹೋರಾಟ ಹಿಂಪಡೆಯಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಹೆಸರಿನಲ್ಲಿ ಪಂಜಾಬ್ ರೈತರ ದಾರಿ ತಪ್ಪಿಸುವ ಪ್ರಯತ್ನಗಳಾಗುತ್ತಿದೆ. ಕೆಲವರು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ಹೋರಾಟವನ್ನು ಬಿಟ್ಟು ಬದುಕಲು ಆಗುವುದಿಲ್ಲ. ಆದರೆ, ನಾವು ದಾರಿ ತಪ್ಪಿಸುವ ಹೋರಾಟಗಾರರ ಬಗ್ಗೆ ಎಚ್ಚರವಾಗಿರಬೇಕು. ಆತ್ಮ ನಿರ್ಭರ್ ಭಾರತ್ ಕೇವಲ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಇಡೀ ದೇಶದ ಜನರ ಸಹಕಾರ ಬೇಕು. ಹೊಸ ಎಫ್ ಡಿಐ ಅಂದರೆ ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ. ಈ ಹೊಸ ಎಫ್ ಡಿಐ ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಅಗತ್ಯ ಎಂದು ಹೇಳಿದರು.