ಮಾರುಕಟ್ಟೆ ಪ್ರವೀಣರಿಂದಾಗಿ ರೈತನ ಕೈ ಮಾತ್ರವಲ್ಲದೆ ಬಾಯಿಯೂ ಕೆಸರುಮಯ: ಶ್ರೀಧರಮೂರ್ತಿ ಕೆ.ಎಸ್
ಉಡುಪಿ: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿರುವ ಬಂಜರು ಭೂಮಿಯನ್ನು ಫಸಲು ಭೂಮಿಯಾಗಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಗಮನ ಸೆಳೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಹೇಳಿದರು.
ಜಿಲ್ಲಾ ಕೃಷಿಕ ಸಂಘ ವತಿಯಿಂದ ಭಾನುವಾರ ಶಾರದಾ ಮಂಟಪದಲ್ಲಿ ಜರುಗಿದ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕರೊನಾ ಲಾಕ್‌ಡೌನ್ ಕಾರಣದಿಂದಾಗಿ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿ ಪಾಳುಬಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿ ಸಾಕಷ್ಟು ಪ್ರಮಾಣದಲ್ಲಿ ಭತ್ತವನ್ನು ಬೆಳೆದಿದ್ದರು.
ಇದೀಗ ಜಿಲ್ಲೆಯಲ್ಲಿ ಪಾಳುಬಿದ್ದ 1500 ಹೆಕ್ಟೆರ್ ಭೂಮಿಯಲ್ಲಿ ಕೃಷಿ ಚಟುವಟಿಕೆಯು ಕೃಷಿ ಇಲಾಖೆ, ಜಿ.ಪಂ ಸಂಪೂರ್ಣ ಸಹಕಾರದಲ್ಲಿ ನಡೆಯಲಿದೆ. ಈ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಎಲ್ಲ ರೈತರು ಇದರಲ್ಲಿ ಭಾಗಿಯಾಗಿ ಸಹಕರಿಸಬೇಕು ಎಂದು ಕರೆ ನೀಡಿದರು. ಜಿಲ್ಲೆಯ ಕೃಷಿಕರು ವೈಜ್ಞಾನಿಕ ಮತ್ತು ಪ್ರಾಯೋಗಿಕತೆಗೆ ಒತ್ತು ನೀಡಬೇಕಿದೆ. ಕೃಷಿ ಉತ್ಪನ್ನಗಳಿಗೆ ಬ್ರಾಂಡಿಂಗ್ ಸೃಷ್ಟಿಸಬೇಕು. ಈ ಮೂಲಕ ರೈತರಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಸೃಷ್ಟಿಯಾಗಲಿದೆ. ಮಲ್ಲಿಗೆ ಬೆಳೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಂಶೋಧನೆ ಮತ್ತು ಪ್ರಯೋಗ ನಡೆಯಬೇಕು ಎಂದರು.
ಕೆಲವು ಮಾರುಕಟ್ಟೆ ಪ್ರವೀಣರಿಂದಾಗಿ ರೈತನ ಕೈ ಮಾತ್ರವಲ್ಲದೆ ಬಾಯಿಯೂ ಕೆಸರುಮಯ ಆಗುವಂತಾಗಿದೆ ರೈತರ ಪರಿಸ್ಥಿತಿ. ಕೃಷಿ ಎನ್ನುವುದು ವೃತ್ತಿಯೊಂದಿಗೆ ಅದೊಂದು ಧ್ಯಾನವು ಆಗಿದೆ. ರೈತನು ಪಂಚಶೀಲ ಶಕ್ತಿ ಹೊಂದಿರುವನಾಗಿರುತ್ತಾನೆ ಎಂದು ದಿಕ್ಸೂಚಿ ಭಾಷಣದಲ್ಲಿ ಖ್ಯಾತ ಚಿಂತಕರು ನಿವೃತ್ತ ಉಪನ್ಯಾಸಕರಾದ ತೀರ್ಥಳ್ಳಿ ಶ್ರೀಧರಮೂರ್ತಿ ಕೆ.ಎಸ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು. ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಎಜಿಎಂ ಗೋಪಾಲಕೃಷ್ಣ ಸಾಮಗ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಉದ್ಯಮಿ ಮಂಜುನಾಥ ಉಪಾಧ್ಯ, ಕೃಷಿಕ ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗಾ ಇದ್ದರು.
ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಪ್ರಸ್ತಾವಿಸಿದರು. ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಸಂಘದ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಕುದಿ ವರದಿ ಮಂಡಿಸಿದರು. ಶಿಂಬ್ರ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ನಿವೃತ್ತ ಉಪನ್ಯಾಸಕ ಶ್ರೀಧರಮೂರ್ತಿ ಕೆ.ಎಸ್ ದಿಕ್ಸೂಚಿ ಭಾಷಣ ಮಾಡಿದರು. ಕೃಷಿ ಸಾಧಕರಿಗೆ ಸನ್ಮಾನ: ಸಾಧಕ ಕೃಷಿಕರಾದ ಉದಯ ಕುಮಾರ್ ಆಚಾರ್ಯ ಹಿರಿಯಡ್ಕ, ರಘುನಾಥ ಪುನಾರ್ ಬೆಳ್ಮಣ್, ಸುಜಾತ ಶೆಟ್ಟಿ ಮಂದಾರ್ತಿ, ಜೋನ್ ಅಮ್ಮಣ್ಣ ಮುದರಂಗಡಿ, ವಿಶ್ವನಾಥ ಅಮೀನ್ ಕಳತ್ತೂರು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.