ಕೋಟಿ – ಚೆನ್ನಯ್ಯ, ನಾಯಕರ ನಿಂದನೆ: ಅಧಿಕಾರಿ ವಿರುದ್ಧ ನಿರ್ಣಯ ಕೈಗೊಂಡ ಬಿಲ್ಲವ ಸಂಘ

ಮೂಲ್ಕಿ : ಬಿಲ್ಲವ ಆರಾಧ್ಯ ಶಕ್ತಿಗಳಾದ ಕೋಟಿ ಚೆನ್ನಯ್ಯ ಹಾಗೂ ಬಿಲ್ಲವ ಸಮುದಾಯದ ನಾಯಕರುಗಳ ಬಗ್ಗೆ ತುಚ್ಚವಾಗಿ ನಿಂದಿಸಿರುವ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯನ್ನು ಪ್ರತಿಯೊಬ್ಬ ಬಿಲ್ಲವ ಸಮುದಾಯದವರು ಹಾಗೂ ಬಿಲ್ಲವ ಸಂಘಟನೆಗಳು ಯಾವುದೇ ವೈಯಕ್ತಿಕ ಹಾಗೂ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಇನ್ನು ಮುಂದೆ ಆಹ್ವಾನ ನೀಡದಿರಲು ನಿರ್ಧರಿಸಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷರಾದ ರಮೇಶ್ ಅಮೀನ್ ಕೊಕ್ಕರ್‌ಕಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಂಡಿದೆ.

ಬಿಲ್ಲವ ಸಮುದಾಯ ಸಹಿತ ತುಳುನಾಡಿನ ಸರ್ವಧರ್ಮದವರು ಸಹ ಆರಾಧ್ಯ ದೈವ-ದೇವರುಗಳಾಗಿ ನಂಬಿಕೊಂಡು ಬಂದಿರುವ ಕೋಟಿ ಚೆನ್ನಯ್ಯ ಅವಳಿ ವೀರರಿಗೆ ಸಮಸ್ತ ಜನರು ಗರಡಿಯ ಇನ್ನಿತರ ದೈವ ಸಾನ್ನಿಧ್ಯದ ಮೂಲಕ ವಿಶೇಷ ಸ್ಥಾನಮಾನವನ್ನು ನೀಡಿರುವುದನ್ನು ತನ್ನ ಹೀನ ಬುದ್ದಿಯಿಂದ ಜಗದೀಶ್ ಅಧಿಕಾರಿ ಸಾರ್ವಜನಿಕವಾಗಿ ಹೇಳಿರುವುದರ ಬಗ್ಗೆ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅವರ ಮನಸ್ಥಿತಿಯನ್ನು ಅರಿತು ಅವರು ಕೇಳಿರುವ ಕ್ಷಮೆಯು ಆಧಾರ ರಹಿತವಾಗಿ ಕೇವಲ ಕಾಲ್ಪನಿಕವಾಗಿದೆ. ಮನಸ್ಸಿನಲ್ಲಿ ದುಷ್ಟ ಬುದ್ದಿಯನ್ನಿಟ್ಟುಕೊಂಡು ಯಾರದೋ ಒತ್ತಡಕ್ಕೆ ಮಣಿದು ಕ್ಷಮೆ ಕೇಳಿದ್ದರೂ ಸಹ ಬಿಲ್ಲವ ಸಮಾಜ ಅವರನ್ನು ಕ್ಷಮಿಸೋಲ್ಲ ಎಂದು ನಿರ್ಧರಿಸಲಾಗಿದೆ.

ಸಭೆಯಲ್ಲಿ ನಿರ್ಧರಿಸಿದಂತೆ ಜಗದೀಶ್ ಅಧಿಕಾರಿಯನ್ನು ಮೂಲ್ಕಿಯ ಬಿಲ್ಲವ ಸಮಾಜದವರು ತಮ್ಮ ವೈಯಕ್ತಿಕ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂಬ ನಿರ್ಣಯಕ್ಕೆ ಗೌರವ ನೀಡಬೇಕು, ಇಂತಹ ಸಮಾಜ ವಿಘಟನೆ ಮಾಡುವ ವ್ಯಕ್ತಿಗಳಾಗಲಿ, ಶಕ್ತಿಗಳು ಬಿಲ್ಲವ ಸಮಾಜವನ್ನು ಒಡೆದು ಆಳುವ ನೀತಿಯ ವಿರುದ್ಧವಾಗಿ ಈ ಮಹತ್ವದ ನಿರ್ಧಾರವಾಗಿದೆ. ವಿಶ್ವದಲ್ಲಿರುವ ಎಲ್ಲಾ ಬಿಲ್ಲವ ಸಂಘಟನೆಗಳು ಸಹ ಜಗದೀಶ್ ಅಧಿಕಾರಿಯನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಹ್ವಾನಿಸದೇ ತಿರಸ್ಕರಿಸಬೇಕು ಎಂದು ಬಿಲ್ಲವ ಸಂಘಗಳ ಒಕ್ಕೂಟವಾದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಮನವಿ ಮಾಡುವುದು ಎಂದು ನಿರ್ಣಯಿಸಿಕೊಂಡು, ರಾಜಕೀಯವಾಗಿ ಇಂತಹ ವ್ಯಕ್ತಿಗಳು ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡುವ ಹಾಗೂ ತನ್ನ ಬೇಜವಬ್ದಾರಿಯ ಉದ್ಧಟತನ ತೋರಿರುವುದರಿಂದ ಇವರನ್ನು ಕೂಡಲೆ ರಾಜಕೀಯ ಪಕ್ಷದಿಂದ ಶಾಶ್ವತವಾಗಿ ನಿವೃತ್ತಿಗೊಳಿಸಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹಾಗೂ  ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರಲ್ಲಿ ಮನವಿ ಮಾಡಿ ಹಕ್ಕೊತ್ತಾಯ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಘು ಸುವರ್ಣ ಕೊಳಚಿಕಂಬಳ, ಯದೀಶ್ ಅಮೀನ್ ಕೊಕ್ಕರ್‌ಕಲ್, ಡಾ.ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ ನಗರ ಪಂಚಾಯತ್‌ನ ಉಪಾಧ್ಯಕ್ಷ ಸತೀಶ್ ಅಂಚನ್ ಬಾಳೆಹಿತ್ಲು, ಬಿರುವೆರ್ ಕುಡ್ಲದ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಶ್ರೀ ನಾರಾಯಣಗುರು ಸೇವಾದಳದ ಪರವಾಗಿ ಉಮೇಶ್ ಮಾನಂಪಾಡಿ, ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ಸಾಮಾಜಿಕ ಚಿಂತಕ ದಿನೇಶ್ ಬಪ್ಪನಾಡು ಮತ್ತಿತರ ಸಂಘದ ಸದಸ್ಯರು ಮಾತನಾಡಿದರು.
ಇಂತಹ ನಿರ್ಣಯ ಪ್ರತೀ ಬಿಲ್ಲವ ಸಂಘದಲ್ಲಿ ನಡೆಯಲಿ ಎಂಬ ಆಶಯ ನಮ್ಮದು…. ಇದು ಬಿಲ್ಲವರ ಸ್ವಾಭಿಮಾನದ ಪ್ರಶ್ನೆ-ರಮೇಶ್ ಅಮೀನ್
ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ
.

Leave a Reply

Your email address will not be published. Required fields are marked *

error: Content is protected !!