ಬದುಕಿರುವಾಗಲೇ ಗಂಡನ ಮರಣ ಪ್ರಮಾಣ ಪತ್ರ ಮಾಡಿಸಿದ್ದಾದರೂ ಯಾಕೆ ಗೊತ್ತಾ!
ಬೆಂಗಳೂರು: ಯಾರಾದರೂ ಬದುಕಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ…? ಅದೂ ಬದುಕಿರುವ ವ್ಯಕ್ತಿಗೆ ತಿಳಿಯದ ಹಾಗೆ ಮರಣ ಪ್ರಮಾಣ ಪತ್ರ ಸಿದ್ದ ಪಡಿಸಿರುವ ಬಗ್ಗೆ ಕೇಳಿದ್ದೀರಾ…? ಆದರೆ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ಪತಿಗೆ ತಿಳಿಯದ ಹಾಗೆ, ಆತ ಬದುಕಿರುವಾಗಲೇ ಆತನ ನಕಲಿ ಮರಣ ಪ್ರಮಾಣ ಪತ್ರ ಸಿದ್ದ ಪಡಿಸಿ ವಿಧವಾ ವೇತನ ಪಿಂಚಣಿ ಪಡೆಯುತಿದ್ದ ಮಹಿಳೆಯೊಬ್ಬರ ವಿರುದ್ದ ಬೆಂಗಳೂರಿನ ಮಾಗಡಿ ರಸ್ತೆ ಠಾಣೆಯಲ್ಲಿ ಅಪರೂಪದ ಪ್ರಕರಣ ದಾಖಲಾಗಿದೆ. ಸುಜಾತಾ ಎಂಬವರು ತಮ್ಮ ಪತಿ ಭಾಸ್ಕರ ಅವರು ಬದುಕಿರುವಾಗಲೇ ಅವರ ನಕಲಿ ಮರಣ ಪ್ರಮಾಣ ಪತ್ರವನ್ನು ಸಿದ್ದಪಡಿಸಿ ವಿಧವಾ ಪಿಂಚಣಿ ಪಡೆಯುತ್ತಿದ್ದವರು. ಮನೆಯಲ್ಲಿ ತನ್ನದೇ ಮರಣ ಪ್ರಮಾಣ ಪತ್ರವನ್ನು ನೋಡಿ ಗಾಬರಿಗೊಂಡ ಭಾಸ್ಕರ್ ಅವರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಭಾಸ್ಕರ್ ಎಂಬುವವರು ನೀಡಿರುವ ದೂರಿನ ಅನ್ವಯ ಆತನ ಪತ್ನಿ ಸುಜಾತಾ ಹಾಗೂ ಮತ್ತಿತರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಭಾಸ್ಕರ್ ಎರಡು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದು, ಮತ್ತೆ ವಾಪಸ್ ಬಂದಿರಲಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಪತ್ನಿ ಸುಜಾತಾ ತನ್ನ ಪತಿ ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಕಲಿ ದಾಖಲೆಗಳನ್ನು ಸಿದ್ದ ಪಡಿಸಿ ನೀಡಿದ್ದಾರೆ. ಭಾಸ್ಕರ್ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರವನ್ನು ಆಕೆ 2019ರಲ್ಲಿ ಪಡೆದುಕೊಂಡಿದ್ದೂ ಪೂರಕ ದಾಖಲೆಯಾಗಿ ಆದನ್ನು ಸಲ್ಲಿಸಿದ್ದಾರೆ. ಹೀಗಾಗಿ ಅಕೆಗೆ ವಿಧವಾ ವೇತನ ಪಿಂಚಣಿಯನ್ನೂ ಸರಕಾರ ಮಂಜೂರು ಮಾಡಿದೆ. ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಆಕೆ ಈ ಪಿಂಚಣಿ ಪಡೆಯುತ್ತಿದ್ದರು. ಕೆಲತಿಂಗಳ ಹಿಂದೆ ಭಾಸ್ಕರ್ ಪುನಃ ಮನೆಗೆ ಬಂದಿದ್ದು, ಮನೆಯಲ್ಲಿ ಕೆಲ ದಾಖಲೆಗಳನ್ನು ಶೋಧಿಸುತಿದ್ದ ವೇಳರ ವಿಚಾರ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆ ಪತಿಯ ಮರಣಪ್ರಮಾಣ ಪತ್ರ ಪಡೆದು ಪಿಂಚಣಿ ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಆಕೆಗೆ ಜೀವಂತ ಇರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಲ್ಲಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಮರಣ ಪ್ರಮಾಣ ಪತ್ರ ಮಾಡಿಕೊಟ್ಟ ಬಿಬಿಎಂಪಿ ಸಿಬ್ಬಂದಿಯನ್ನೂ ಪತ್ತೆಹಚ್ಚಬೇಕಿದೆ. ಈ ಕುರಿತು ಸಂಬಂಧಪಟ್ಟ ಪಾಲಿಕೆ ವ್ಯಾಪ್ತಿಯ ಬಿಬಿಎಂಪಿ ಕಚೇರಿಗೆ ಪತ್ರ ಬರೆದು ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. |