ಬಿಲ್ಲವ ಸಮುದಾಯ ಅವಹೇಳನ: ಜಗದೀಶ್ ಅಧಿಕಾರಿ ವಿರುದ್ದ ದೂರು ದಾಖಲು
ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿ ದಂತೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಬಿಲ್ಲವ ಸಂಘದ ವಿವಿಧ ಘಟಕಗಳ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.
ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣ ಮಾಡುವ ವೇಳೆ ಜಗದೀಶ್ ಅವರು, ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದು, ಜಗದೀಶ್ ಅಧಿಕಾರಿಯವರ ಈ ಮಾತುಗಳ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ಮಾತಿನ ನಂತರ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್ನಲ್ಲಿ ರೆಕಾರ್ಡ್ ಆಗಿದೆ. ತನ್ನೊಂದಿಗೆ ಇದ್ದವರೊಂದಿಗೆ ಮಾತನಾಡಿರುವ ಆಡಿಯೋ ದಾಖಲೆಯಲ್ಲಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಲ್ಲವ ಸಮುದಾಯ ಆಗ್ರಹಿಸಿದೆ.