ಬಿಜೆಪಿ ಆಡಳಿತಾವಧಿಯಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲವೇ?: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್
ಉಡುಪಿ: ಮನೆಯಿಂದ ಹೊರಗೆ ಹೋದ ನಿಮ್ಮ ಹೆಣ್ಣು ಮಗಳು ಕ್ಷೇಮವಾಗಿ ಮನೆಗೆ ಹಿಂತಿರುಗಿ ಬರಬೇಕಾದರೆ ಬಿಜೆಪಿಗೆ ಮತ ನೀಡಿ ಎನ್ನುವ ಆಕರ್ಷಕ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಆಡಳಿತದಲ್ಲಿ ಕೀಚಕರನ್ನು ಹುಟ್ಟು ಹಾಕುತ್ತಿದೆಯೇ ? ರಾಮ ರಾಜ್ಯ, ರಾಮ ಮಂದಿರದ ಜಪ ಮಾಡುತ್ತಿರುವ ಅಂಧ ಮೋದಿ ಭಕ್ತರಿಗೆ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಬಗ್ಗೆ ಲವಲೇಶವೂ ಚಿಂತೆ ಇಲ್ಲವೇ? ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಆಡಳಿತದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳ ಬಗ್ಗೆ ತುಟಿಪಿಟಿಕ್ಕೆನ್ನದ ಮೋದಿ ಸರ್ಕಾರವು ತನ್ನ ಬೇಟಿ ಬಚಾವ್ ಬೇಟಿ ಪಡಾವ್ ಯೋಜನೆಯನ್ನು ಬರೀ ಘೋಷಣೆಗೆ ಸೀಮಿತಗೊಳಿಸಿ ದ್ದು ಅವರ ಆಡಳಿತದಲ್ಲಿ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಉತ್ತರ ಪ್ರದೇಶ ಮಾತ್ರವಲ್ಲ, ಕರ್ನಾಟಕದಲ್ಲೂ ಇದರ ಕರಾಳ ನೆರಳು ಬಿದ್ದಿರುವುದು ದುರಾದೃಷ್ಟಕರ. ಮಾತೆತ್ತಿದರೆ ಮಾತೆಯರೇ ಎಂದು ಮಹಿಳೆಯರನ್ನು ಸಂಬೋಧಿಸುವ ಬಿಜೆಪಿಯ ಮೋದಿ ಭಕ್ತರಿಗೆ ಈ ದೇಶದಲ್ಲಿ,ಈ ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವ ಅರಿವಿಲ್ಲವೇ? ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಅಮಾನುಷ ಅತ್ಯಾಚಾರವನ್ನು ಬಿಜೆಪಿಯವರು ಯಾಕೆ ಖಂಡಿಸುತ್ತಿಲ್ಲ? ಇವರ ಮನೆಯ ಹೆಣ್ಣು ಮಕ್ಕಳಿಗೆ ಇಂತಹ ಸ್ಥಿತಿ ಬಂದಿದ್ದರೆ ಇವರು ಹೀಗೇ ನಾಲಿಗೆ ಬಿದ್ದವರಂತೆ ಸುಮ್ಮನಿರುತ್ತಿದ್ದರೆ? ಮಹಿಳೆಯರ ಧ್ವನಿಯಾಗುತ್ತೇನೆ ಎಂದು ಹೇಳಿ ಮತ ಪಡೆದು ಸಂಸದೆ ಶೋಭಾ ಕರಂದ್ಲಾಜೆಯವರೇ , ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಇಂತಹ ಹೇಯ ಘಟನೆಯೊಂದು ನಡೆದಾಗಲೂ ತಮ್ಮ ಧ್ವನಿ ಏಳುತ್ತಿಲ್ಲ ಯಾಕೆ? ಒಬ್ಬ ಹೆಣ್ಣಾಗಿಯೂ, ತಮ್ಮ ಕಿವಿಗೆ ಆ ಅಮಾಯಕ ಹೆಣ್ಣು ಮಗಳ ಕುಟುಂಬದ ಆಕ್ರಂದನ ಕೇಳುತ್ತಿಲ್ಲವೆಂದಾದರೆ ತಮಗೆ ಆ ಸ್ಥಾನದಲ್ಲಿ ನಿಲ್ಲುವ ಅಧಿಕಾರವೂ ಇಲ್ಲ. ನಿಮ್ಮ ಜವಾಬ್ದಾರಿಯ ಅರಿವು ಸ್ವಲ್ಪವಾದರೂ ಇದ್ದಲ್ಲಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಯನ್ನು ನೀಡುವಲ್ಲಿ ಕಾರ್ಯೋನ್ಮುಖರಾಗಿ.ಈ ಕಾರ್ಯದಲ್ಲಿ ಪ್ರಾಮಾಣಿಕವಾಗಿ ,ಅದರಲ್ಲೂ ತಾವೂ ಒಬ್ಬ ಹೆಣ್ಣಾಗಿ, ಇನ್ನೊಬ್ಬ ಹೆಣ್ಣಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿ,ಮಾಡಿದ ಪಾಪಗಳನ್ನು ತೊಳೆದುಕೊಳ್ಳಿ. ಇನ್ನು ಮಾನ್ಯ ಮುಖ್ಯಮಂತ್ರಿಗಳೇ,ತಮ್ಮ ಆಡಳಿತಾವಧಿಯಲ್ಲಿ ಏನು ದುರ್ಘಟನೆಗಳು ನಡೆದರೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ನಿರ್ಲಿಪ್ತರಾಗಿ ವರ್ತಿಸುವುದು ತಮ್ಮ ಹುದ್ದೆಗೆ ಶೋಭೆ ತರುವಂತಹುದಲ್ಲ.ಮೋದಿ,ಷಾ ಇರುವ ವರೆಗೆ ತಮ್ಮನ್ನು ಯಾರೂ ಏನೂ ಮಾಡಲಾರರು ಎನ್ನುವ ಭ್ರಮೆಯನ್ನು ಬಿಟ್ಟು ಅಮಾಯಕ ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಗಮನಹರಿಸಿ.ಶೃಂಗೇರಿಯ ಸಂತ್ರಸ್ತೆಗೆ ನ್ಯಾಯ ದೊರಕಿಸಿ, ನಿಮ್ಮ ಆಡಳಿತಾವಧಿಯಲ್ಲಿ ಅಟ್ಟಹಾಸ ಗೈಯ್ಯುತ್ತಿರುವ ದುರುಳ ಕೀಚಕರನ್ನು ಸದೆಬಡಿಯಲು ಮುಂದಾಗಿ ಎಂದು ಅವರು ಹೇಳಿದ್ದಾರೆ. |