ಬುಡಕಟ್ಟು ಜನಾಂಗದವರು ಒಗ್ಗಟ್ಟಿನಲ್ಲಿದ್ದರೆ ಯಶಸ್ಸು: ದಿನಕರ ಬಾಬು

ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡ
ಮತ್ತು ಉಡುಪಿ ಜಿಲ್ಲಾಮಟ್ಟದ ಕೊರಗ ಕ್ರೀಡೋತ್ಸವವು ಬುಡಕಟ್ಟು ಜನಾಂಗಗಳನ್ನು ಮುಖ್ಯವಾಹಿನಿಗೆ ತರುವ ಮುಖ್ಯ ಉದ್ಧೇಶವಾಗಿದೆ. ಯಾವುದೇ ಯಶಸ್ಸನ್ನು ಸಾಧಿಸಬೇಕಾದರೆ ಬುಡಕಟ್ಟು ಜನಾಂಗದವರು ಒಗ್ಗಟ್ಟಿನಿಂದ ಇರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ದಿನಕರ ಬಾಬು ಹೇಳಿದ್ದಾರೆ.

ಅವರು, ಶುಕ್ರವಾರ ಎಂಜಿಎo ಕಾಲೇಜು ಮೈದಾನದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ
ಜಿಲ್ಲಾಮಟ್ಟದ ಮೂರು ದಿನದ ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಪ್ರಥಮ ದಿನದ ಕ್ರಿಕೆಟ್ ಪಂದ್ಯಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯಾವಾಗಲು ಸಿದ್ದವಾಗಿದೆ. ಈ ಸಮುದಾಯದ ಯುವಕರು ಉತ್ಸಾಹವನ್ನು ತೊರಿಸಬೇಕು. ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸುವ ರೀತಿಯಲ್ಲಿಯೇ, ಉತ್ತಮವಾದ ಸಮಾಜ ಕಟ್ಟುವ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಇಲ್ಲಿ ನಡೆಯುತ್ತಿರುವ ಕ್ರೀಡೋತ್ಸವದಲ್ಲಿ ಉತ್ತಮ ಸಾಧನೆ ತೋರುವ ಯುವ ಕ್ರೀಡಾಪಟುಗಳನ್ನು ಆಯ್ಕೆ
ಮಾಡಿ, ಅವರಿಗೆ ಉತ್ತಮ ತರಬೇತಿಯನ್ನು ನೀಡಿ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಭಾಗವಹಿಸಲು ಬೇಕಾಗುವ ಹಣದ ಸಹಾಯವನ್ನು ಸರ್ಕಾರದಿಂದ ಅಥವಾ ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ನೀಡಲಾಗುವುದು ಎಂದು ಡಿಸಿ ಹೇಳಿದರು.

ಕೊರಗ ಸಮುದಾಯದವರಲ್ಲಿ ಅಭಿವೃದ್ಧಿಯಾಗುವ ಛಲ ಕಂಡುಬರುತ್ತಿದೆ. ಕ್ರೀಡೆಯ ಜೊತೆಗೆ ತಮ್ಮ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕು. ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಬರಬೇಕು ಎಂದು
ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರ ನಾಯಕ್ ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯದ ಬಾಬು ಪಾಂಗಳ, ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಮುಖ್ಯ ಉದ್ದೇಶ ಕೊರಗ ಸಮುದಾಯದ ಯುವಕರನ್ನು ಮುಖ್ಯವಾಹಿನಿಗೆ ತರುವುದು ಮತ್ತು ಅವರನ್ನು ಅಭಿವೃದ್ಧಿಶೀಲರನ್ನಾಗಿ ಮಾಡುವುದು. ಸಮುದಾಯದವರು ಕಾಲಹರಣ ಮಾಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನದಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಕರು ಕೇವಲ ಕ್ರೀಡೆಗಳಿಗೆ ಸೀಮಿತರಾಗದೆ ಬಹುಮುಖ ಪ್ರತಿಭೆಗಳಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಕೊರಗ ಸಮುದಾಯದ ಮುಖ್ಯಸ್ಥ ಗಣೇಶ್ ಕುಂದಾಪುರ
ಮತ್ತಿತರರು ಉಪಸ್ಥಿತರಿದ್ದರು. ರಾಜ್‌ಶೇಖರ್ ಉಡುಪಿ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!