ಎಲ್‌ಐಸಿ ಶೇರು ವಿಕ್ರಯ, ವಿದೇಶಿ ನೇರ ಬಂಡವಾಳದ ಮಿತಿ ಹೆಚ್ಚಳಕ್ಕೆ ವಿರೋಧ: ವಿಮಾ ನೌಕರರ ಸಂಘ

ಉಡುಪಿ: ಕೇಂದ್ರ ಅರ್ಥ ಸಚಿವರಾದ ನಿರ್ಮಲ ಸೀತಾರಾಮನ್ ಈ ವರ್ಷದ ಬಜೆಟನ್ನು ಮಂಡಿಸಿದ್ದು, ತಮ್ಮ ಬಜೆಟ್ ಮಂಡನೆಯ ಭಾಷಣದಲ್ಲಿ ವಿಮಾ ಕ್ಷೇತ್ರದ ಬಗ್ಗೆ ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿಮಾ ಕಾಯ್ದೆ 1938 ಕ್ಕೆ ಕೆಲವೊಂದು ತಿದ್ದುಪಡಿಯನ್ನು ತರುವ ಮೂಲಕ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಈಗಿನ 49% ದಿಂದ 74% ಏರಿಸುವುದು ಮತ್ತು ವಿದೇಶಿ ಮಾಲಕತ್ವದ ಸಂಸ್ಥೆಗಳಿಗೆ ಕೆಲವೊಂದು ರಕ್ಷಣಾ ನಿಯಮಗಳೊಂದಿಗೆ ವ್ಯವಹಾರವನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

ಅವರು ಮುಂದುವರಿಯುತ್ತಾ ಒಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆ ಮತ್ತು ಎರಡು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ವಿತ್ತೀಯ ವರ್ಷದಲ್ಲಿ ಎಲ್.ಐ.ಸಿ ಯ ಶೇರು ವಿಕ್ರಯವನ್ನು ಕಾರ್ಯರೂಪಕ್ಕೆ ತರುವ ಸೂಚನೆಯನ್ನು ನೀಡಿದ್ದಾರೆ.

ವಿಮಾ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಹೆಚ್ಚಳಕ್ಕೆ ಯಾವುದೇ ರೀತಿಯ ಸಮರ್ಥನೆಗಳಿಲ್ಲ. ಈಗಾಗಲೇ49% ವಿದೇಶಿ ನೇರ ಬಂಡವಾಳದ ಮಿತಿಯಿದ್ದರೂ ಸಹ ಖಾಸಗೀ ವಿಮಾ ಉದ್ಯಮಗಳಲ್ಲಿ ವಿದೇಶಿ ನೇರ ಬಂಡವಾಳವು ಈಗಿರುವ ಮಿತಿಗಿಂತಲೂ ತುಂಬಾ ಕಡಿಮೆಯಿದೆ. ವಿಮಾ ಉದ್ದಿಮೆಯ ಬೆಳವಣಿಗೆಗೆ ವಿದೇಶಿ ಬಂಡವಾಳದ ಕೊರತೆಯು ಅಡಚಣೆಯಾಗಿಲ್ಲ. ವಿದೇಶಿ ನೇರ ಬಂಡವಾಳದ ಹೆಚ್ಚಳದಿಂದ ಅಮೂಲ್ಯವಾದ ದೇಶೀಯ ಉಳಿತಾಯದ ಮೇಲೆ ವಿದೇಶಿ ಬಂಡವಾಳವು ಇನ್ನಷ್ಟು ನಿಯಂತ್ರಣವನ್ನು ಸಾಧಿಸಲಿದೆ. ನಮ್ಮಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೇಶೀಯ ಉಳಿತಾಯದ ಮೇಲೆ ಹೆಚ್ಚಿನ ನಿಯಂತ್ರಣ ಸರಕಾರಕ್ಕೆ ಇರುವುದು ಅತ್ಯಂತ ಮುಖ್ಯವಾಗಿದೆ. ವಿದೇಶಿಯರಿಗೆ ಈ ನಿಯಂತ್ರಣವನ್ನು ನೀಡುವುದು ಖಂಡಿತವಾಗಿಯೂ ದೇಶದ ಹಿತಾಸಕ್ತಿಗೆ ಮಾರಕವಾಗಿದೆ.

ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಸಂಸ್ಥೆಯ ಖಾಸಗೀಕರಣವು ದೇಶದ ಹಿತಕ್ಕೆ ಮಾರಕವಾಗಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಅಭಿಮತವಾಗಿದೆ. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಕೂಡಾ ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ರಂಗವು ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ದೇಶದ ಆರ್ಥಿಕ ಪರಿಸ್ಥಿತಿಯು ಮಂದಗತಿಯಲ್ಲಿರುವ ಸನ್ನಿವೇಶದಲ್ಲಿ ಕೂಡಾ ಸಾಮಾನ್ಯ ವಿಮಾ ರಂಗವು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಈ ಕಂಪನಿಗಳು ಈಗ ಕೆಲವೊಂದು ತೊಂದರೆಗಳನ್ನು ಎದುರಿಸುತ್ತಿದ್ದರೆ, ಅದು ವ್ಯವಹಾರದ ಕಾರ್ಯಕ್ಷಮತೆಯ ಕುಸಿತದಿಂದಾಗಿ ಅಲ್ಲ ಬದಲಾಗಿ ಈ ಕಂಪನಿಗಳನ್ನು ಹೆಚ್ಚು ಆಕರ್ಷಕಗೊಳಿಸಿ ಭವಿಷ್ಯದಲ್ಲಿ ಹೂಡಿಕೆಗೆ ಅನುವುಗೊಳಿಸಲು ಸರಕಾರವು ನಿಬಂಧನೆಗಳನ್ನು ಹೇರಲ್ಪಟ್ಟಿರುವುದರಿಂದ. ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣದ ಬದಲು ಸಾರ್ವಜನಿಕ ವಲಯದ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳನ್ನು ವಿಲೀನಗೊಳಿಸುವ ಮೂಲಕ ಸ್ಪರ್ಧೆಯನ್ನು ಎದುರಿಸಲು ಸನ್ನದ್ದಗೊಳಿಸುವುದು ಸೂಕ್ತವಾಗಿದೆ.

‘ಆತ್ಮ ನಿರ್ಭರ ಭಾರತ’ದ ಬಗ್ಗೆ ಸರಕಾರವು ಅತ್ಯಂತ ಮುತುವರ್ಜಿಯಿಂದ ಮಾತನಾಡುತ್ತಿರುವಾಗ ಎಲ್.ಐ.ಸಿ ಯ ಶೇರು ವಿಕ್ರಯವು ಖಂಡಿತವಾಗಿಯೂ ಸರಕಾರಕ್ಕೆ ದೊಡ್ಡ ಹೊಡೆತವಾಗಲಿದೆ. ಎಲ್.ಐ.ಸಿ ಯು ಒಂದು ಅತ್ಯಪೂರ್ವ ಸಂಸ್ಥೆಯಾಗಿದೆ. ಇಂತಹ ಒಂದು ಸಂಸ್ಥೆಯು ಜಗತ್ತಿನಾದ್ಯಂತ ಎಲ್ಲಿಯೂ ಇರಲಾರದು. ಈ ಸಂಸ್ಥೆಯ ಲಾಭವನ್ನು ತನಗಾಗಿ ಬಳಸಿಕೊಳ್ಳದೆ ಅದು ಪೂರ್ಣಪ್ರಮಾಣದಲ್ಲಿ ಸರಕಾರ ಮತ್ತು ಪಾಲಿಸಿದಾರರಿಗೆ ಹಂಚಿಕೆ ಮಾಡುತ್ತಿದೆ. ಈ ಸಂಸ್ಥೆಯು ತನಗಾಗಿ ಲಾಭಗಳಿಸದೆ, ದೇಶದ ಸಾರ್ವತ್ರಿಕ ಬೆಳವಣಿಗೆಯ ಸೇವೆಯನ್ನು ಒದಗಿಸುವ ಧ್ಯೇಯದೊಂದಿಗೆ ಮತ್ತು ಬೃಹತ್ ಸಂಖ್ಯೆಯ ಗ್ರಾಹಕ ನೆಲೆಗಟ್ಟಿನಲ್ಲಿ ಸಾಮೂಹಿಕ ಸಹಕಾರದ ಲಾಂಛನವಾಗಿ ಕೆಲಸಮಾಡುತ್ತಿದೆ. ಇಲ್ಲಿ ಸರಕಾರವು ಒಂದು ಟ್ರಸ್ಟಿಯಾಗಿದೆ.1956 ರಲ್ಲಿ ಸಂಸತ್ತಿನಲ್ಲಿ ಕಾಯಿದೆಯ ಮೂಲಕ ಯಾವ ಉದ್ದೇಶಗಳಿಂದ ಅಸ್ತಿತ್ವಕ್ಕೆ ಬಂದಿತೋ ಅದಕ್ಕಾಗಿ ನಿಷ್ಟೆಯಿಂದ ಮತ್ತು ಬದ್ದತೆಯಿಂದ ಈ ಸಂಸ್ಥೆಯು ಕೆಲಸ ಮಾಡಿದೆ. ಎಲ್.ಐ.ಸಿ ಯ ಶೇರು ವಿಕ್ರಯವು ಈ ಎಲ್ಲಾ ಉದ್ದೇಶಗಳನ್ನು ತಲೆಕೆಳಗಾಗಿಸುತ್ತದೆ. ಈ ಪ್ರಕ್ರಿಯೆಯು ದೇಶ ಮತ್ತು ಪಾಲಿಸಿದಾರರಿಗೆ ಮೌಲ್ಯಾಧಾರವಾಗಿರುವ ಬದಲು ತನ್ನ ಶೇರುದಾರರಿಗೆ ಹೆಚ್ಚು ಲಾಭ ಗಳಿಸಲು ಒತ್ತಾಯಿಸಲ್ಪಡುತ್ತದೆ. ಆದ್ದರಿಂದ ಈ ದೇಶದ ಸಮಸ್ತ ಜನರ ಆಸ್ತಿಯಾಗಿರುವ ಸಂಸ್ಥೆ ಕೆಲವೇ ಕೆಲವು ಶ್ರೀಮಂತರಿಗೆ ಲಾಭಗಳಿಸುವ ಸಾಧನವಾಗಲಿದೆ.

ಅಖಿಲ ಭಾರತ ವಿಮಾ ನೌಕರರ ಸಂಘವು ಈಗಾಗಲೇ ಸಾರ್ವಜನಿಕರ ಮಧ್ಯೆ ಎಲ್.ಐ.ಸಿ ಮತ್ತು ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪನಿಗಳ ಶೇರು ವಿಕ್ರಯದ ವಿರುದ್ಧ ಮತ್ತು ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯ ಹೆಚ್ಚಳದ ವಿರಿದ್ಧ ಅರಿವು ಮೂಡಿಸುವುದರಲ್ಲಿ ನಿರತವಾಗಿದೆ. ನಾವು ಈಗಾಗಲೇ ಸುಮಾರು ೩೫೦ ಸಂಸತ್ ಸದಸ್ಯರನ್ನು ಸಂಪರ್ಕಿಸಿ ಅವರಿಗೆ ಇದರ ಬಗ್ಗೆ ಮನವರಿಕೆ ಮಾಡಿದ್ದೇವೆ. ಈಗಾಗಲೇ ದೊಡ್ಡ ಸಂಖ್ಯೆಯ ಸಾರ್ವಜನಿಕ ಅಭಿಪ್ರಾಯವು ಸರಕಾರದ ಈ ನಡೆಯ ವಿರುದ್ಧವಿದೆ. ವಿಮಾ ನೌಕರರೆಲ್ಲರೂ ಅಖಿಲ ಭಾರತ ವಿಮಾ ನೌಕರರ ಸಂಘದ ನೇತೃತ್ವದಲ್ಲಿ ಎಲ್.ಐ.ಸಿ ಮತ್ತು ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪನಿಗಳನ್ನು ಸಾರ್ವಜನಿಕ ವಲಯದಲ್ಲಿ ಉಳಿಸಲು ಮತ್ತು ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯ ಹೆಚ್ಚಳವನ್ನು ತಡೆಗಟ್ಟಲು ಹೋರಾಟ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಸರಕಾರದ ನಡೆಯ ವಿರುದ್ಧ ರೂಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದೆಂದು ಉಡುಪಿ ವಿಮಾ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!