ಯುವ ಪೀಳಿಗೆಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ: ಡಾ. ತಲ್ಲೂರ ಶಿವರಾಮ್ ಶೆಟ್ಟಿ
ಉಡುಪಿ: ಕ್ಯಾನ್ಸರ್ ಒಂದು ಮಾರಕ ಕಾಯಿಲೆಯಾಗಿದ್ದು, ಅದಕ್ಕೆ ವಯೋಮಿತಿಯ
ನಿರ್ಬಂಧವಿಲ್ಲಾ. ಆದ್ದರಿಂದ ಇಂದಿನ ಯುವಪೀಳಿಗೆಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಮತ್ತು ಅದನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಉಡುಪಿ ವಿಭಾಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ತಲ್ಲೂರ ಶಿವರಾಮ್ ಶೆಟ್ಟಿ ಹೇಳಿದರು.
ಅವರು ಗುರುವಾರ ರೆಡ್ ಕ್ರಾಸ್ ಭವನದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಇವರ ಸಹಯೋಗದೊಂದಿಗೆ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ, ಕ್ಯಾನ್ಸರ್ ಹರಡುವ ಸಂಭವ ಇದ್ದರೂ ಅದನ್ನು ಅರಿತುಕೊಳ್ಳದೆ ಯುವಜನತೆ, ಧೂಮಪಾನ, ಮದ್ಯಪಾನ ಮಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಸ್ವಸ್ಥ ಮತ್ತು ಸ್ವಚ್ಛ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ಆ ನಿಟ್ಟಿನಲ್ಲಿ ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನವಾಗಬೇಕು ಎಂದರು.
ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಜಿ ಡಾ.ಅರವಿಂದ್ ನಾಯಕ್ ಅಮ್ಮುಂಜೆ ಮಾತನಾಡಿ, ಈ ಮೊದಲು ಎರಡು ಬಗೆಯ ಕ್ಯಾನ್ಸರ್ ಮಾತ್ರ ತಿಳಿದಿದ್ದು, ಈಗ 150 ಬಗೆಯ ಕ್ಯಾನ್ಸರ್‌ನ್ನು ಗುರುತಿಸಲಾಗಿದೆ.
ಹಾಗೆಯೇ ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನೂ ಕೂಡಾ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಕ್ಯಾನ್ಸರ್ ದೃಢಪಟ್ಟಿದ್ದರೆ ಭಯ ಬೀಳದೆ ಆತ್ಮ ವಿಶ್ವಾಸ ಮತ್ತು ಧೈರ್ಯದಿಂದ ಎದುರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಾಲತಿ ತಂತ್ರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಕೆ. ಜಯರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಅಶೋಕ ಕುಮಾರ್ ವೈ ಜಿ ಸ್ವಾಗತಿಸಿ ವಂದಿಸಿದರು.