ಉಡುಪಿ: ಪಂದುಬೆಟ್ಟಿನ ತಪೋವನಿ ಮಾತಾಜಿ ನಿಧನ

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟಿದ್ದ ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ ಮೂಲ ಹೆಸರು ವಾರಿಜಾಕ್ಷಿ ಗುರುವಾರ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು.

ಬಾಲ್ಯದಲ್ಲೇ ಅಧ್ಯಾತ್ಮದ ಸೆಳೆತಕೊಕ್ಕೊಳಗಾಗಿ ಉಡುಪಿಯ ಮಠ ಮತ್ತು ದೇವಾಲಯದ ಪರಿಸರದಲ್ಲೇ ಭಜನೆ ಪ್ರವಚನ ಸತ್ಸಂಗ ಮೊದಲಾದವುಗಳಲ್ಲಿ ಭಾಗಿಯಾಗುತ್ತಿದ್ದ ಸುಭದ್ರಾ  ಮುಂದೆ ಪೇಜಾವರ ಶ್ರೀಗಳಲ್ಲಿ ಮಂತ್ರೋಪದೇಶ ಪಡೆದು ಅಧ್ಯಾತ್ಮ ಸಾಧನೆಗಾಗಿ ಸುಮಾರು 50-60 ವರ್ಷಗಳ ಹಿಂದೆ ಉತ್ತರದ ಹಿಮಾಲಯ ಸೇರಿದ್ದರು.

ಹಿಮಾಲಯದ ಗಂಗೋತ್ರಿಯಿಂದಲೂ ಬಹಳ ಎತ್ತರದ ಪ್ರದೇಶ ಪಾಂಡವರು ತಪಸ್ಸಾಚರಿಸಿದ್ದ ತಪೋವನದಲ್ಲಿ ನಿರಂತರ ಅತ್ಯಂತ ಪ್ರತಿಕೂಲ ವಾತಾರವರಣದಲ್ಲೂ ನಿರಂತರ ಒಂಭತ್ತು ವರ್ಷಗಳ ಕಾಲ ತಪಸ್ಸಾಚರಿಸಿದ್ದರು . ಈ ಸಾಧನೆಗೈದ ಜಗತ್ತಿನ ಏಕೈಕ ಮಹಿಳೆ ಎನ್ನುವುದು ಹಿಮಾಲಯದ ನೂರಾರು ಸಾಧು ಸಂತರ ಅಭಿಪ್ರಾಯ‌. ಈ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನೀ ಮಾ ಎಂದೇ ಪ್ರಸಿದ್ಧರಾಗಿದ್ದರು .

ಆ ಬಳಿಕ ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳಿಗೆ ಯಾತ್ರಿಗಳಿಗೆ ಊಟೋಪಚಾರ , ಆರೋಗ್ಯ ಸೇವೆಗಳನ್ನು ನಡೆಸುತ್ತಿದ್ದರು . ತೀವ್ರ ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ  ಅಲ್ಲಿನ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು. ಜೀವನ ಪರ್ಯಂತ ತನ್ನ ಎಲ್ಲ ಅಧ್ಯಾತ್ಮಿಕ ಸಾಧನೆಗೆ ಉಡುಪಿ ಕೃಷ್ಣ ಮತ್ತು ಪೇಜಾವರ ಶ್ರೀಗಳೇ ಕಾರಣ ಎಂದೇ ಹಿಮಾಲಯದ ಪ್ರತಿಯೊಬ್ಬರಲ್ಲೂ ಹೇಳಿಕೊಳ್ಳತ್ತಿದ್ದರು .ಅವರ ಆಧ್ಯಾತ್ಮ ಸಾಧನೆಯ ಕುರಿತಾಗಿ ಹಿಂದಿಯಲ್ಲಿ  ಪುಸ್ತಕವೊಂದು ಪ್ರಕಟವಾಗಿತ್ತು.

ಅದರ  ಕನ್ನಡ ಅನುವಾದವನ್ನು ಪ್ರೊ. ಭಾಸ್ಕರ ಮಯ್ಯ ಮಾಡಿದ್ದು ಮಾತಾಜಿ ಯವರ ಮೂವರು ಸಹೋದರರು  ಸದ್ಯ ಉಡುಪಿಯಲ್ಲೇ ಇದ್ದು  ನರೇಂದ್ರ ಮತ್ತಿತರರು ಪ್ರಕಟಿಸಿದ್ದು ಇತ್ತೀಚೆಗಷ್ಟೇ ಹರಿದ್ವಾರದ ಆಸ್ಪತ್ರೆಯಲ್ಲೇ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಆಚಾರ್ಯ ಬಾಲಕೃಷ್ಣರು ಮಾತಾಜಿ ಸಮ್ಮುಖದಲ್ಲೇ ಬಿಡುಗಡೆಮಾಡಿದ್ದರು. ವಾಸುದೇವ ಭಟ್ ಪೆರಂಪಳ್ಳಿಯವರು ಅವರಜೀವಿತಾವಧಿಯಲ್ಲೇ ಅವರ ಉಪಸ್ಥಿತಿಯಲ್ಲೇ ಈ ಕೃತಿ ಬಿಡುಗಡೆಯಾಗಬೇಕೆಂದು ಬಹಳ ಶ್ರಮಪಟ್ಟು ಈ ಕಾರ್ಯಕ್ರಮ ಸಂಯೋಜಿಸಿದ್ದರು.

 ಮಾತಾಜಿ ನಿಧನಕ್ಕೆ ಸಂತಾಪ : ತಫೋವನೀ ಮಾ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಡುಪಿ ಕೃಷ್ಣ ಮತ್ತು ತಮ್ಮ ಗುರುಗಳಲ್ಲಿ ಅನನ್ಯ ಶ್ರದ್ಧೆ ಭಕ್ತಿಯನ್ನು ಹೊಂದಿದ್ದ ಮಾತಾಜಿಯವರು ಕಠೋರ ಅಧ್ಯಾತ್ಮ ತುಡಿತದಿಂದ ಮಾಡಿದ ಸಾಧನೆ ಮಾದರಿಯಾದುದು ಅವರ ಆತ್ಮಕ್ಕೆ ಶ್ರೀ ಕೃಷ್ಣನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಕೇಂದ್ರದ ಮಾಜಿ ಮಂತ್ರಿ ಉಮಾಭಾರತಿ, ಪ್ರೊ. ಭಾಸ್ಕರ ಮಯ್ಯ , ಪೇಜಾವರ ಮಠದ ದಿವಾನ  ರಘುರಾಮಾಚಾರ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ವಾಸುದೇವ ಭಟ್ ಪೆರಂಪಳ್ಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಬಾಬಾ ರಾಮದೇವ್, ಉಮಾಭಾರತಿ, ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಹರಿದ್ವಾರ ದಲ್ಲಿರುವ ಮಾತಾಜಿಯವರ ಆಶ್ರಮದಲ್ಲಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ. ಪೇಜಾವರ ಶ್ರೀಗಳ ಮಾರ್ಗದರ್ಶನದಂತೆ ಮಾಧ್ವ ಸಂಪ್ರದಾಯ ಪ್ರಕಾರ ಅಂತಿಮ ವಿಧಿವಿಧಾನಗಳಿಗೆ ವ್ಯವಸ್ಥೆಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!