ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರ್‌ಗಳ ಅಸುರಕ್ಷಿತ ಚಾಲನೆಗೆ ಕಡಿವಾಣ ಹಾಕಿ: ದ.ಕ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರ್‌ಗಳ ಅಸುರಕ್ಷಿತ ಚಾಲನೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಅನಿಲ ಟ್ಯಾಂಕರ್‌ಗಳ ಅಪಘಾತದಿಂದಾಗಿ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವುಗಳ ಸಾಗಾಣಿಕೆಗೆ ನಿಗಧಿ ಪಡಿಸಿರುವ ಸಮಯದಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಅಂತಹ ಲಾರಿಗಳಿಗೆ ದಂಡ ವಿಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಅನಿಲ ಟ್ಯಾಂಕರ್‌ಗಳ ಅಪಘಾತವಾದ ಸಂದರ್ಭದಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಗಳು ಬಂದ್ ಮಾಡಬೇಕಾಗುತ್ತದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಗ್ಯಾಸ್ ಟ್ಯಾಂಕರ್‌ಗಳ ಅಪಘಾತವಾದ ಸಂದರ್ಭದಲ್ಲಿ ಅವುಗಳ ನಿರ್ವಹಣೆಗೆ ಗ್ಯಾಸ್ ಕಂಪನಿಯ ಅಧಿಕಾರಿಗಳು ಶೀಘ್ರದಲ್ಲಿಯೇ ಸ್ಪಂದಿಸಬೇಕೆಂದೂ ಸೂಚನೆ ನೀಡಿದರು.
ಇನ್ನು ಗ್ಯಾಸ್ ಟ್ಯಾಂಕರ್‌ಗಳ ಸಂಚಾಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಅವರು, ಟ್ಯಾಂಕರ್ ವಾಹನಗಳ ಚಾಲನೆಗೆ ಎರಡು ಜನ ಚಾಲಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು. ಗ್ಯಾಸ್ ಕಂಪನಿಯವರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ಈ ವಾಹನಗಳ ಚಾಲನೆಗೆ ಅವಕಾಶ ನೀಡುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.