ಚಿತೆಗೆ ಅಗ್ನಿಸ್ಪರ್ಶಕ್ಕೂ ವಿಲ್ ಬರೆದ ಮಹಿಳೆ! ಮಂಗಳೂರಿನಲ್ಲೊಂದು ಅಪರೂಪದ ಘಟನೆ

ಮಂಗಳೂರು :ಸಾಮಾನ್ಯವಾಗಿ ಯಾರೇ ಆದರೂ ತಮ್ಮ ಆಸ್ತಿ, ಹಣ, ಅಂತಸ್ತು ತಮ್ಮವರಿಗೆ ಸೇರಬೇಕು ಎಂಬ ಕಾರಣಕ್ಕಾಗಿ ವಿಲ್ ಬರೆಯುವುದನ್ನು ನೋಡಿದ್ದೇವೆ, ಆ ಬಗ್ಗೆ ಕೇಳಿದ್ದೇವೆ. ಇನ್ನೂ ತಮ್ಮ ಆಸ್ತಿ ಪಾಸ್ತಿಗಳನ್ನು ತಮ್ಮವರನ್ನು ಹೊರತು ಪಡಿಸಿ ತಾವು ಸಾಕಿದ ಪ್ರಾಣಿಗಳು ಅಥವಾ ಇನ್ಯಾರದೋ ಹೆಸರಿನಲ್ಲಿ ವಿಲ್ ಬರೆದಿಡೋದನ್ನೂ ಕೇಳಿದ್ದೇವೆ.

ಆದರೆ ಇಲ್ಲೊಬ್ಬರು ಮಹಿಳೆ ತಮ್ಮ ಮರಣಾನಂತರ ತಮ್ಮ ಚಿತೆಗೆ ಇವರೇ ಅಗ್ನಿ ಸ್ಪರ್ಶ ಮಾಡಿಸಬೇಕು ಎಂದು ಬರೆದು ನೋಟರಿ ಅಫಿದಾವಿತ್ ಮಾಡಿದ್ದಾರೆ. ಈ ರೀತಿಯ ಒಂದು ವಿಶೇಷವಾದ ಅಫಿದಾವಿತ್ ಮಾಡಿಸಿದವರು ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಾವೂರಿನ ಪದವಿನಂಗಡಿಯ ಪೆರ್ಲಗುರಿ ನಿವಾಸಿ ಮಲ್ಲಿಕಾ ಶೇಖರ್ ಶೆಟ್ಟಿಗಾರ್ (71) ಎಂಬವರು.

ಈ ಬಗ್ಗೆ ಪತ್ರಿಕೆಯೊಂದರಲ್ಲಿ ಸಾರ್ವಜನಿಕಾ ಪ್ರಕಟಣಾ ವರದಿ ಪ್ರಕಟವಾಗಿದ್ದು ಇದರಲ್ಲಿ ಅವರು, “ಮಲ್ಲಿಕಾ ಶೇಖರ್ ಆದ ನಾನು ಪ್ರಮಾಣ ಮಾಡುವುದೇನೆಂದರೆ ನಾನು ವಿಧಿವಶಳಾದಾಗ ನನ್ನ ಚಿತೆಗೆ ನನ್ನ 2 ನೇ ಅಳಿಯನಾದ ನವೀನ್ ಶೆಟ್ಟಿಗಾರ್ ಅಗ್ನಿಸ್ಪರ್ಶ ಮಾಡಬೇಕೆಂದು ನನ್ನ ಇಚ್ಚೆಯಾಗಿರುತ್ತದೆ. ಕಾರಣಾಂತರಗಳಿಂದ ಅವನು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ನನ್ನ ಹಿರಿಯ ಮಗಳಾದ ಸಪ್ನಲತಾ ಕಾರ್ಯವನ್ನು ನಿರ್ವಹಿಸತಕ್ಕದ್ದು, ನನ್ನ ಚಿತೆಗೆ ಅಗಿಸ್ಪರ್ಶ ಮಾಡುವ ಕಾರ್ಯವನ್ನು ನಿರ್ವಹಿಸಲು ಈಗಾಗಲೇ ತಿಳಿಸಿದ ನವೀನ್ ಮತ್ತು ಸಪ್ನಲತಾರನ್ನು ಹೊರತು ಪಡಿಸಿ ಇನ್ಯಾರಿಗೂ ಹಕ್ಕು ಇರುವುದಿಲ್ಲ. ಈ ವಿಷಯಗಳೆಲ್ಲವೂ ಸತ್ಯವಾಗಿದ್ದು, ನಾನು ಸ್ವ ಇಚ್ಛೆಯಿಂದ ನೋಟರಿ ವಕೀಲೆ ಲನಿ ಮರಿಝಾ ಪಿಂಟೋ ಅವರಲ್ಲಿ ಜ.25 ರಂದು ನೋಟರಿ ಅಫಿದಾವಿತ್ ಮಾಡಿರುತ್ತೇನೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!