ಕೊಡವೂರು ಶಂಕರ ನಾರಾಯಣ ದೇವಸ್ಥಾನ: ಫೆ.4ರಂದು ‘ದೊಂದಿ ಬೆಳಕಿನ ರಾಶಿ ಪೂಜೆ’
ಉಡುಪಿ: ಲೋಕ ಕಲ್ಯಾಣಾರ್ಥವಾಗಿ ಫೆ.4 ರಂದು ನಡೆಯಲಿರುವ ದೊಂದಿ ಬೆಳಕಿನ ರಾಶಿ ಪೂಜೆಗೆ ಕೊಡವೂರಿನ ಶಂಕರ ನಾರಾಯಣ ದೇವಸ್ಥಾನ ಸರ್ವ ಸನ್ನದ್ದಗೊಂಡಿದೆ. ಈ ದೊಂದಿ ಬೆಳಕಿನ ರಾಶಿ ಪೂಜೆಯು ದೇವಸ್ಥಾನದ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಹಾಗೂ ಋತ್ವಿಜ ಅವರ ತಂಡದೊಂದಿಗೆ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.
ಫೆ.4 ರ ಸೂರ್ಯೋದಯದಿಂದ ಫೆ.5 ಸೂರ್ಯೋದಯದವರೆಗೆ ಈ ದೊಂದಿ ಬೆಳಕಿನ ರಾಶಿ ಪೂಜೆ ನಡೆಯಲಿದೆ. ಫೆ.4 ರ ಬೆಳಿಗ್ಗೆ ರಾಶಿಪೂಜಾ ಕಲಶಾಧಿವಾಸ, ಅಧಿವಾಸ ಯಾಗ, ಸಂಕಲ್ಪ, ಭಾರತೀ ಪೂಜೆ, ಆರೂರು ಶ್ರೀ ವಿಷ್ಣುಮೂರ್ತಿ ಸಂಕೀರ್ತನೆ ತಂಡದಿಂದ ದೇವರ ನಾಮ ಸಂಕೀರ್ತನೆ ಪ್ರಾರಂಭವಾಗಲಿದೆ. ಬೆಳಿಗ್ಗೆ 6.56ಕ್ಕೆ ಮಕರ ಲಗ್ನದಲ್ಲಿ ರಾಶಿ ಪೂಜೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದೆ.
ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ಮರುದಿನ ಫೆ. 5 ರಂದು ಬೆಳಿಗ್ಗೆ ಉದ್ಯಾಪನಾ ಬಲಿ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.4 ರಂದು ಮಧ್ಯಾಹ್ನ ರೋಹಿತ್ ಮಲ್ಪೆ ಮತ್ತು ಬಳಗದವರಿಂದ ಭಾವಯಾನ ಸುಗಮ ಸಂಗೀತ, ರಾತ್ರಿ 7.30 ರಿಂದ ಹಟ್ಟಿಯಂಗಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.
ಇನ್ನು ರಾಶಿ ಪೂಜೆಯ ಸಲುವಾಗಿ 20 ಸಾವಿರಕ್ಕೂ ಅಧಿಕ ಮಂದಿ ಭಕ್ತರು ದೇವಸ್ಥಾನ ಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಸೇವೆ ನೀಡಿದ ಭಕ್ತರು ತಮ್ಮ ರಾಶಿಗೆ ಅನುಗುಣವಾಗಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗಾಗಿ ದೇವರ ದರ್ಶನ, ಪಾರ್ಕಿಂಗ್, ಶೌಚಾಲಯ ಹೀಗೆ ಎಲ್ಲಾ ಅಗತ್ಯತೆಗಳ ವ್ಯವಸ್ಥೆ ಯನ್ನು ಮಾಡಲಾಗಿದೆ. ಇದರೊಂದಿಗೆ ಅನ್ನ ಪ್ರಸಾದಕ್ಕೆ ವಿಶಾಲವಾದ ಚಪ್ಪರವನ್ನು ಹಾಕಲಾಗಿದೆ. ಅಲ್ಲದೆ ರಾಶಿ ಪೂಜೆಯ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುವವರಿಗೆ ಬೆಳಗಿನಿಂದ ರಾತ್ರಿಯ ವರೆಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಹಾಗೂ ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ತಿಳಿಸಿದ್ದಾರೆ.