ಮಂಗಳೂರು: ಆಳುಪ ದೊರೆಯ ಶಾಸನ ಪತ್ತೆ

ಮಂಗಳೂರು: ನಮ್ಮ ನಾಡಿನಲ್ಲಿ ಆಗಾಗ ಕುರೂಹುಗಳು, ಶಾಸನಗಳು ಪತ್ತೆಯಾಗುವ ಮೂಲಕ ರಾಜ ಮಹಾ ರಾಜರ ಆಳ್ವಿಕೆ ಇತ್ತು ಎಂಬೂದನ್ನು ಸಾರುತ್ತಿರುತ್ತದೆ. ಇದೀಗ ಮಂಗಳೂರು ತಾಲೂಕಿನ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿ ಆಳುಪ ದೊರೆ ಮೂರನೇ ಕುಲಶೇಖರನ ಶಾಸನ ಪತ್ತೆಯಾಗಿದ್ದು ಇಲ್ಲಿನ ಇತಿಹಾಸವನ್ನು ಸಾರಿ ಹೇಳುತ್ತಿದೆ.

19 ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕಣ ಶಿಲೆ (ಗ್ರಾನೈಟ್) ಯಲ್ಲಿ ರಚಿಸಲ್ಪಟ್ಟಿದೆ. 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿರುವ ಈ ಶಾಸನ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ. ಶಾಸನದಲ್ಲಿ ಸಾಧಾರಣ ಸಂವತ್ಸರದ ಧನು ಮಾಸ 2ನೆ ರವಿವಾರ ಎಂಬ ಕಾಲಮಾನದ ಉಲ್ಲೇಖವನ್ನು ಮಾಡಲಾಗಿದ್ದು, ಶಾಸನದಲ್ಲಿ ಮೂರನೇ ಕುಲಶೇಖರನನ್ನು “ಶ್ರೀ ಮತ್ಪ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ” ಎಂದು ಬಣ್ಣಿಸಲಾಗಿದೆ. ಜೊತೆಗೆ ವೀರ ಕುಲಶೇಖರ ಮಂಗಳೂರ ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಡಿಯಾರ ಪ್ರದೇಶದ ಬೆದೆಕಾರು (ಮಳೆಗಾಲದಲ್ಲಿ ಬೆಳೆಯುವ ತರಿ ಭೂಮಿ) ಭೂಮಿಗಳನ್ನು ದಾನ ಕೊಟ್ಟಿರುವ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.
ಶಾಸನದ ಕೊನೆಯಲ್ಲಿ ”ಈ ಶಾಸನವನ್ನು ಯಾರು ಹಾಳು ಮಾಡುವರೋ ಅವರು ಗಂಗೆ ಮತ್ತು ವಾರಣಾಸಿಯಲ್ಲಿ ಸಹಸ್ರ ಗೋವುಗಳನ್ನು ಕೊಂದ ದೋಷಕ್ಕೆ ಹೋಗುವರು” ಎಂಬ ವಾಕ್ಯವನ್ನು ಬರೆಯಲಾಗಿದೆ. ಈ ದಾನವನ್ನು ಗುರುವ (ಗುರುವಣಪ್ಪ) ಒಡೆಯನು ಮಾಡಿದ ಎಂಬುದನ್ನು ತಿಳಿಸಲಾಗಿದೆ.

ಇನ್ನೂ ಈ ಶಾಸನದಲ್ಲಿ ಉಲ್ಲೇಖಗೊಂಡ ಅಡಿಯಾರ ಎಂಬ ಹೆಸರಿನ ಊರು ಪ್ರಸ್ತುತ ಚಾಲ್ತಿಯಲ್ಲಿರುವ ಅಡ್ಯಾರ್‌ನ ಪೂರ್ವದ ಹೆಸರಾಗಿರಬಹುದು ಎಂದು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಶಾಸನವನ್ನು ಕಂಡ ಸ್ಥಳೀಯ ಯುವಕರು ಈ ಬಗ್ಗೆ ಕುರಿತು ಮಾಹಿತಿ ನೀಡಿದ್ದು, ಈ ಶಾಸನವನ್ನು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಶಾಸನದಲ್ಲಿರುವ ಮಾಹಿಯನ್ನು ತಿಳಿಸಿದ್ದಾರೆ. ಇವರ ಜೊತೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು, ವಿಶ್ವಾಸ್, ವಿನೀತ್, ರಿಖಿಲ್, ಪ್ರಸನ್ನ, ರತನ್, ಸುಜಿತ್, ಸುರೇಶ್ ಶೆಟ್ಟಿ ಅವರು ಕ್ಷೇತ್ರಕಾರ್ಯ ಶೋಧನೆಗೆ ಸಹಾಯ ನೀಡಿದ್ದರು. ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಸ್ಥಳೀಯರ ಸಹಕಾರದಿಂದ ಇದನ್ನು ಸರಿಯಾಗಿ ನಿಲ್ಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!