ಕುಂದಾಪುರ: ಚರಂಡಿಯಲ್ಲಿ ತ್ಯಾಜ್ಯಯುಕ್ತ ನೀರು – ಸಾಂಕ್ರಾಮಿಕ ರೋಗ ಹರಡುವ ಭೀತಿ
ಕುಂದಾಪುರ: ಕೊರೋನಾ ಪ್ರಕರಣಗಳು ಕಡಿಮೆ ಆಗಿದ್ದರೂ ಕೂಡಾ ಕೊರೋನಾ ಕರಿ ಛಾಯೆಯ ಭೀತಿ ಮಾತ್ರ ಕಡಿಮೆ ಆಗಿಲ್ಲ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ಭಯಪಡುವಷ್ಟರ ಮಟ್ಟಿಗೆ ಜನರ ಮನದಲ್ಲಿ ಸಾಂಕ್ರಮಿಕ ಕಾಯಿಲೆಗಳ ಹರಡುವಿಕೆಯ ಭೀತಿ ಮನೆಮಾಡಿದೆ.
ಹೀಗಿರುವಾಗ ಕುಂದಾಪುರದಲ್ಲೊಂದು ಕಡೆ ಮಳೆ ನೀರು ಹರಿಯುವ ಚರಂಡಿಯಲ್ಲಿ ನಿಂತ ನೀರು ಕಲುಷಿತಗೊಂಡಿದ್ದು ಸ್ಥಳೀಯ ನಿವಾಸಿಗಳಲ್ಲಿ ಸಾಂಕ್ರಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಖಾರ್ವಿ ಮೇಲ್ಕೇರಿ ಹಾಗೂ ಬಹದ್ದೂರ್ ಷಾ ವಾರ್ಡ್ ನ ನಡುವೆ ಇರುವ ಈ ಮಳೆ ನೀರು ಹರಿಯುವ ಚರಂಡಿಯಲ್ಲಿ ವಿಪರೀತ ತ್ಯಾಜ್ಯ, ಕಸಕಡ್ಡಿಗಳು ಕೊಳೆತು ನೀರು ಕಲುಷಿತಗೊಂಡು ದುರ್ನಾತ ಬೀರುತ್ತಿದೆ.
ಇದೀಗ ಕಲುಷಿತ ನೀರಿನಿಂದ ಸೊಳ್ಳೆಗಳು ಉತ್ಪತ್ತಿ ಆಗುತ್ತಿದ್ದು ಸಾಂಕ್ರಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಅಲ್ಲದೆ ಸುತ್ತ ಮುತ್ತಲ ಪರಿಸರದಲ್ಲಿ ಹಿರಿಯ ನಾಗರಿಕರು, ಮಕ್ಕಳು, ರೋಗಿಗಳು ಇದ್ದು ಇವರ ಸ್ವಾಸ್ಥ್ಯ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಇದರೊಂದಿಗೆ ಒಂದೆಡೆ ದಿನಾ ಸೊಳ್ಳೆಕಾಟವಾದರೆ ಮತ್ತೊಂದೆಡೆ ಈ ಪರಿಸರದಲ್ಲಿ ಸ್ಥಳೀಯರು ದಿನವಿಡೀ ಮೂಗು ಮುಚ್ಚಿಕೊಂಡೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ತ್ಯಾಜ್ಯ ಮಿಶ್ರಿತ ಕಲುಷಿತ ನೀರಿನಿಂದ ಉಂಟಾಗಬಹುದಾದ ಅಪಾಯಗಳನ್ನು ಊಹಿಸಿರುವ ಸ್ಥಳೀಯ ನಿವಾಸಿಗಳು ಈ ದುರಾವಸ್ಥೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.