ಠೇವಣಿದಾರರಿಗೆ ವಂಚಿಸಿದರೆ 7 ವರ್ಷ ಜೈಲು, ರೂ.50 ಕೋಟಿವರೆಗೆ ದಂಡ
ಬೆಂಗಳೂರು: ಹಣಕಾಸು ಸಂಸ್ಥೆಗಳು ಠೇವಣಿದಾರರಿಗೆ ವಂಚನೆ ಮಾಡಿದರೆ ಅಂತಹ ಸಂಸ್ಥೆಗಳ ಪ್ರವರ್ತಕರು, ನಿರ್ದೇಶಕರು, ವ್ಯವಸ್ಥಾಪಕರಿಗೆ ರೂ. 10 ಲಕ್ಷದಿಂದ ರೂ.50 ಕೋಟಿ ವರೆಗೆ ದಂಡ ಮತ್ತು ಐದರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ 2020’ಗೆ ವಿಧಾನಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ರಾಜ್ಯದ 2004 ರ ಕಾಯ್ದೆ ಮತ್ತು ಕೇಂದ್ರ ಸರ್ಕಾರ 2019 ರಲ್ಲಿ ತಿದ್ದುಪಡಿ ಮಾಡಿದ ಕಾಯ್ದೆಯನ್ನು ಆಧಾರವಾಗಿಟ್ಟುಕೊಂಡು ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಮಸೂದೆ ಮಂಡಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿವರಿಸಿದರು.
ಯಾವುದೇ ಹಣಕಾಸು ಸಂಸ್ಥೆ ಠೇವಣಿದಾರರಿಗೆ ವಾಗ್ದಾನ ಮಾಡಿದಂತೆ ಅವಧಿ ಪೂರ್ಣಗೊಂಡ ನಂತರ ಬಡ್ಡಿ, ಬೋನಸ್, ಲಾಭದ ರೂಪದಲ್ಲಿ ಮರು ಸಂದಾಯ ಮಾಡದೇ ಇದ್ದರೆ ಅಥವಾ ಮೋಸ ಮಾಡಿದರೆ ಸಂಸ್ಥೆ ಪ್ರವರ್ತಕರ, ನಿರ್ದೇಶಕ, ಪಾಲುದಾರ, ವ್ಯವಸ್ಥಾಪಕ, ನೌಕರ ಶಿಕ್ಷೆಗೆ ಗುರಿಯಾಗುತ್ತಾರೆ. ಹಿಂದೆ ದಂಡ ಮತ್ತು ಜೈಲು ಶಿಕ್ಷೆಯ ಪ್ರಮಾಣ ಕಡಿಮೆ ಇತ್ತು. ಅದನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ವ್ಯಕ್ತಿಯನ್ನು ಹೊರತುಪಡಿಸಿ ಹಣ ಕಾಸು ಸಂಸ್ಥೆಯೇ ವಂಚನೆ ಎಸಗಿದರೆ, ಅಪರಾಧ ನಡೆದ ಸಂದರ್ಭ ದಲ್ಲಿ ವ್ಯವಹಾರ ನಡೆಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ (ಪ್ರವರ್ತಕರಿಂದ ನೌಕರರವರೆಗೆ) ಅಪರಾಧಿ ಎಂದು ಪರಿಗಣಿಸಲಾಗುವುದು. ಇವರು ದಂಡ ಮತ್ತು ಶಿಕ್ಷೆಗೆ ಒಳಪಡುತ್ತಾರೆ ಎಂದು ತಿಳಿಸಿದರು.
ಮಸೂದೆಯ ಕುರಿತು ಮಾತನಾಡಿದ ಕಾಂಗ್ರೆಸ್ನ ರಿಜ್ವಾನ್ ಅರ್ಷದ್, ಮೋಸ ಮಾಡಬಲ್ಲ ಹಣಕಾಸು ಸಂಸ್ಥೆಗಳು ಸ್ಥಾಪನೆಗೊಳ್ಳುವುದನ್ನು ತಡೆಯುವ ಯಾವುದೇ ಅಂಶವನ್ನೂ ಮಸೂದೆ ಒಳಗೊಂಡಿಲ್ಲ. ಅತ್ಯಂತ ಕಠಿಣ ನಿರ್ಬಂಧ ವಿಧಿಸುವ ಮೂಲಕ ವಂಚಕ ಸಂಸ್ಥೆಗಳು ಸ್ಥಾಪನೆಗೊಳ್ಳುವುದನ್ನು ತಡೆಯಬಹುದು ಎಂದು ಹೇಳಿದರು.
ವಿಶೇಷ ನ್ಯಾಯಾಲಯದಿಂದ ವಿಚಾರಣೆ
ಹಣಕಾಸು ಸಂಸ್ಥೆಯ ವಂಚನೆ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದ್ದರೆ, ಹೈಕೋರ್ಟ್ ಮುಖ್ಯನ್ಯಾಯಾಧೀಶರ ಅನುಮತಿ ಪಡೆದು ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಲಾಗುವುದು
ಠೇವಣಿದಾರರಿಗೆ ಹಣ ಸಂದಾಯ ಮಾಡಲು ಮೊಕದ್ದಮೆಗಳನ್ನು ಆಧರಿಸಿ ವಿಶೇಷ ನ್ಯಾಯಾಲಯ ಸಮಿತಿ ರಚಿಸಬಹುದು. ಜಪ್ತಿ ಮಾಡಿದ ಸ್ವತ್ತುಗಳನ್ನು ಇ–ಹರಾಜು ಮೂಲಕ ಹರಾಜು ಹಾಕಬಹುದು.